Belagavi News In Kannada | News Belgaum

ಪ್ರತಿ ಜಿಲ್ಲೆ ಹಾಗೂ ನಗರ ವ್ಯಾಪ್ತಿಯಲ್ಲಿ ಸೈಬರ್ ಪೊಲೀಸ್ ಠಾಣೆ ಸ್ಥಾಪನೆ: ತನಿಖೆಗೆ ಸೈಬರ್ ತಜ್ಞರ ನೇಮಕ -ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಳಗಾವಿ ಸುವರ್ಣಸೌಧ ಡಿ.26  : ಸೈಬರ್ ಅಪರಾಧಗಳನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಸೈಬರ್ ಕ್ರೈಂ ವಂಚನೆಗೊಳಗಾದವರ ನೆರವಿಗಾಗಿ ಸರ್ಕಾರವು ಬೆಂಗಳೂರು ನಗರದಲ್ಲಿ 8 ಹಾಗೂ ಪ್ರತಿ ಜಿಲ್ಲೆ ಹಾಗೂ ನಗರ ವ್ಯಾಪ್ತಿಯಲ್ಲಿ ವಿಶೇಷ ಸೈಬರ್ ಪೊಲೀಸ್ ಠಾಣೆಗಳನ್ನು ತೆರೆದು, ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚಲು ಸೈಬರ್ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸೋಮವಾರ ವಿಧಾನ ಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಪಿ.ಆರ್.ರಮೇಶ್ ಹಾಗೂ ಟಿ.ಎ.ಶರವಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.

ರಾಜ್ಯದಲ್ಲಿ ಸೈಬರ್ ಅಪರಾಧ ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸ್ ಸೈಬರ್ ಸೆಲ್ ಆಧುನೀಕರಣಗೊಳಿಸಲಾಗಿದೆ. ಪೊಲೀಸರಿಗೆ ಆಧುನಿಕ ತರಬೇತಿ ನೀಡಲು ಸಿ.ಐ.ಡಿ ಘಟಕದಲ್ಲಿ ವಿಶೇಷ ತರಬೇತಿ ವಿಭಾಗವನ್ನು ಸ್ಥಾಪಿಸಲಾಗಿದೆ. ಒಟ್ಟು 3657 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ, ಸರ್ಕಾರಿ ಅಭಿಯೋಜಕರು, ಇನ್ನಿತರೆ ಕಾನೂನು ಜಾರಿ ಸಂಸ್ಥೆಗಳಿಗೆ ತರಬೇತಿ ನೀಡಲಾಗಿದೆ. ರಾಜ್ಯದ ಗೃಹ ಇಲಾಖೆ ಗುಜರಾತಿನ ಅಹಮದಬಾದ್ ವಿಧಿ ವಿಜ್ಞಾನ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲಿ ರಾಜ್ಯದ ಆಸಕ್ತ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕೊಡಿಸಿ ನೇಮಕಾತಿ ಮಾಡಲಾಗಿದೆ.

ಕೇಂದ್ರ ಸರ್ಕಾರ ಸೈಬರ್ ದೂರುಗಳನ್ನು ದಾಖಲಿಸಲು ನ್ಯಾಶನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ಸ್ಥಾಪಿಸಿದೆ. ಇದರಲ್ಲಿ ರಾಜ್ಯಕ್ಕೆ ಸಂಬಂಧಿಸಿದಂತೆ ಒಟ್ಟು 80,379 ದೂರುಗಳು ದಾಖಲಾಗಿವೆ. 53,229 ದೂರುಗಳು ಪರಿಶೀಲನಾ ಹಂತದಲ್ಲಿವೆ. 14,960 ದೂರುಗಳನ್ನು ಪರಿಶೀಲಿಸಿ ಮುಕ್ತಾಯಗೊಳಿಸಲಾಗಿದೆ. 901 ದೂರುಗಳು ತಿರಸ್ಕರಿಸಲ್ಪಟ್ಟಿವೆ. 5,734 ಪ್ರಕರಣಗಳ ವಿಚಾರಣೆ ಬಾಕಿಯಿದೆ. ಒಟ್ಟು 528 ಪ್ರಕರಣಗಲ್ಲಿ ಎಪ್.ಐ.ಆರ್. ದಾಖಲಿಸಲಾಗಿದೆ. 2,028 ಪ್ರಕರಣಳನ್ನು ದೂರುದಾರರು ಹಿಂಪಡೆದಿದ್ದಾರೆ.

ಸಾರ್ವಜನಿಕರು ಸೈಬರ್ ವಂಚನೆಯಾದ ತಕ್ಷಣವೇ ದೂರು ದಾಖಲಿಸಬೇಕು. ಹಣದ ವಂಚನೆ ಕಂಡು ಬಂದ ಎರಡು ಗಂಟೆಗಳ ಒಳಗೆ ದೂರು ಸಲ್ಲಿಸಿದರೆ, ವಂಚನೆ ಮಾಡಿ ಹಣ ಪಡೆದುಕೊಂಡವರ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿ ಹಣದ ವಂಚನೆಯಾಗುವುದನ್ನು ತಡೆಯಲಾಗುವುದು. ಈ ರೀತಿಯಲ್ಲಿ ರೂ.70 ಕೋಟಿಗೂ ಅಧಿಕ ಮೊತ್ತದ ಹಣ ವಂಚನೆಗೆ ಒಳಗಾಗುವುದನ್ನು ತಡೆಹಿಡಿಯಲಾಗಿದೆ. ಇಂದು ಸೈಬರ್ ಅಪರಾಧಗಳ ಸ್ವರೂಪ ಬದಲಾಗಿದೆ. ಇದಕ್ಕೆ ತಕ್ಕಹಾಗೆ ಕಾನೂನುಗಳನ್ನು ರೂಪಿಸುವುದು ಅಗತ್ಯವಾಗಿದೆ.

ಜಾಲತಾಣಗಳಲ್ಲಿ ಅಶ್ಲೀಲ ವಿಷಯಗಳು ಪ್ರಸಾರವಾಗುತ್ತಿರುವುದು ಹಾಗೂ ಇವು ವಿದ್ಯಾರ್ಥಿಗಳು ಹಾಗೂ ಯುವಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಾಮಾಜಿಕ ಜಾಲತಾಣ ಹಾಗೂ ಅಂತರ್ಜಾಲದಲ್ಲಿ ಸಮಾಜಘಾತುಕ ಪೋಸ್ಟ್‍ಗಳನ್ನು ಗುರುತಿಸಿ ತೆರವುಗೊಳಿಸುವ ಕಾರ್ಯವನ್ನು ಸೈಬರ್ ಕ್ರೈಂ ಪೊಲೀಸರು ನಿರ್ವಹಿಸುತ್ತಿದ್ದಾರೆ. ಅಶ್ಲೀಲ ವಿಷಯ ಹಾಗೂ ವಿಡಿಯೋಗಳನ್ನು ಪೊಸ್ಟ್ ಮಾಡುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಮಾಹಿತಿ ತಂತ್ರಜ್ಞಾನ ಕಾಯ್ದೆ, ಭಾರತೀಯ ದಂಡ ಸಂಹಿತೆ ಅಡಿ ಪ್ರಕರಣ ದಾಖಲಿಸಲಾಗಿದೆ. ಕೆಟ್ಟ ಪರಿಣಾಮ ಬೀರುವ ಪೋಸ್ಟ್‍ಗಳನ್ನು ಸಂಬಂಧಪಟ್ಟ ಜಾಲತಾಣದಿಂದ ಹಾಗೂ ಸಾರ್ವಜನಿಕರ ವೀಕ್ಷಣೆಯಿಂದ ತೆಗೆದು ಹಾಕಲು ಸಂಬಂಧಪಟ್ಟ ಜಾಲತಾಣದ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಲಾಗುತ್ತಿದೆ.

ಅಶ್ಲೀಲ ದೃಶ್ಯಗಳು, ಸಮಾಜಘಾತುಕ ವಿಷಯ ಪೋಸ್ಟ್‍ಗಳ ಕುರಿತು ದೂರು ಸಲ್ಲಿಸಲು ಪ್ರತಿ ಜಿಲ್ಲೆ ಹಾಗೂ ನಗರಗಳಲ್ಲಿ ಕುಂದುಕೊರತೆ ವಿಭಾಗಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ವಿದ್ಯಾರ್ಥಿಗಳು ಹಾಗೂ ಯುವಕ ಯುವತಿಯರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಇದಕ್ಕೆ ಶಿಕ್ಷಕರು, ಪೋಷಕರ ಸಹಕಾರದ ಅಗತ್ಯವಿದೆ ಎಂದರು.
ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿಯು ಸಾಮಾಜಿಕ ಜಾಲತಾಣಗಳ ಮೂಲಕವೇ ಸ್ಪೋಟಕಗಳನ್ನು ತಯಾರಿಸುವುದನ್ನು ಕಲಿತಿದ್ದ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಆದರೆ ಆರೋಪಿಯು ಈ ಕುರಿತು ಹೇಳಿಕೆ ನೀಡುವುದು ಬಾಕಿಯಿದೆ. ಇದನ್ನು ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಶಾಸಕ ಪಿ.ಆರ್.ರಮೇಶ್ ಮಾತನಾಡಿ ಕಾಮೋತ್ತೇಜಕ ದೃಶ್ಯಗಳನ್ನು ಜಾಲತಾಣಗಳಲ್ಲಿ ವೀಕ್ಷಿಸುವ ಗೀಳು ಯುವಜನರಲ್ಲಿ ಹೆಚ್ಚಾಗಿದೆ. ಇದು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿದೆ. ಹಿಂದೂ ಸಂಸ್ಕøತಿಯೂ ನಾಶವಾಗುತ್ತಿದೆ. ದುಷ್ಟ ಹಾಗೂ ಬಾಹ್ಯ ಶಕ್ತಿಗಳು ವ್ಯವಸ್ಥಿತವಾಗಿ ದೇಶದ ಯುವಜನರನ್ನು ಇದರ ದಾಸರನ್ನಾಗಿ ಮಾಡುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಾಮಾಜಿಕ ಜಾಲತಾಣ ಹಾಗೂ ವೆಬ್‍ಸೈಟ್‍ಗಳಲ್ಲಿನ ಕಾಮೋತ್ತೇಜಕ ದೃಶ್ಯಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಸಕ ಟಿ.ಎ.ಶರವಣ ಮಾತನಾಡಿ ಸೈಬರ್ ಮೂಲಕ ರಾಜ್ಯದಲ್ಲಿ ರೂ.120 ಕೋಟಿಗೂ ಅಧಿಕ ವಂಚನೆ ಎಸಗಲಾಗಿದೆ ಈ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದರು.///

 

ಪೋಕ್ಸೋ ಪ್ರಕರಣ ವಿಚಾರಣೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ: ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕ
-ಸಚಿವ ಆರಗ ಜ್ಞಾನೇಂದ್ರ

 

ಬೆಳಗಾವಿ ಸುವರ್ಣಸೌಧ ಡಿ.26  : ಪೋಕ್ಸೋ ಪ್ರಕರಣಗಳ ವಿಚಾರಣೆ ನಡೆಸಲು ಪ್ರತಿ ಜಿಲ್ಲೆಯಲ್ಲಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ನ್ಯಾಯಾಲಯಗಳಲ್ಲಿ ಪೋಕ್ಸೋ ಪ್ರಕರಣಗಳ ವಿಚಾರಣೆಗೆ ಅನುವಾಗುವಂತೆ ಸಹಾಯಕ ಸರ್ಕಾರಿ ಅಭಿಯೋಜಕರನ್ನು ನೇಮಿಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸೋಮವಾರ ವಿಧಾನ ಪರಿಷತ್ತಿನ ಕಲಾಪದÀಲ್ಲಿ ಶಾಸಕ ಛಲವಾದಿ ಟಿ.ನಾರಾಯಣಸ್ವಾಮಿಯ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ 2019-20 ಸಾಲಿನಲ್ಲಿ ರೂ.7 ಕೋಟಿ, 2020-21 ರಲ್ಲಿ ರೂ.1 ಕೋಟಿಗಳನ್ನು ನಿರ್ಭಯ ಯೋಜನೆಯಡಿ ಬಿಡುಗಡೆ ಮಾಡಲಾಗಿದೆ. ಈ ಅನುದಾನದಲ್ಲಿ ರಾಜ್ಯದ ವಿವಿಧ ಠಾಣೆಗಳಲ್ಲಿ ಹೆಲ್ಪ್‍ಡೆಸ್ಕ್‍ಗಳನ್ನು ಸ್ಥಾಪಿಸಲಾಗಿದೆ. 2021-22 ಸಾಲಿನಲ್ಲಿ ರೂ. 2.5 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಮಹಿಳಾ, ಮಕ್ಕಳ ಹಾಗೂ ಸ್ಪಂದನ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ. ಮಹಿಳೆಯರ ರಕ್ಷಣೆಗಾಗಿ ನಗರ ಹಾಗೂ ಜಿಲ್ಲಾ ಪ್ರದೇಶಗಳಲ್ಲಿ ಗಸ್ತು ಪಡೆಗಳನ್ನು ನಿಯೋಜಿಸಲಾಗಿದೆ. ಪಿಂಕ್, ಹೊಯ್ಸಳ, ಚೆನ್ನಮ್ಮ, ಓಬವ್ವ ಪಡೆಗಳು ಗಸ್ತು ಕಾರ್ಯ ನಿರ್ವಹಿಸುತ್ತಿವೆ. ಹೆಣ್ಣು ಮಕ್ಕಳಲ್ಲಿ ಆತ್ಮರಕ್ಷಣೆ ಕಲೆ ಬೆಳೆಸಲು ಶಾಲೆಗಳಲ್ಲಿ ಕರಾಟೆ ತರಬೇತಿ ನೀಡಲಾಗುತ್ತಿದೆ.
ಪೋಕ್ಸೋ ಕಾಯ್ದೆಯಡಿ ಮಕ್ಕಳ ಅತ್ಯಾಚಾರಿ ಆರೋಪಿಗೆ ಜೀವಾವಧಿಯಿಂದ ಮರಣದಂಡನೆ ಶಿಕ್ಷೆ ವಿಧಿಸುವ ಕಾನೂನು ರೂಪಿಸಲಾಗಿದೆ. ಪ್ರಕರಣದ ತನಿಖಾ ಅವಧಿಯನ್ನು 90 ದಿನಗಳಿಂದ 60 ದಿನಗಳಿಗೆ ಇಳಿಸಲಾಗಿದೆ. ಅತ್ಯಾಚಾರಿಗಳಿಗೆ ಜಾಮೀನು ಮಂಜೂರು ಮಾಡುವುದನ್ನು ನಿಷೇಧಿಸಲಾಗಿದೆ. ಕಾಯ್ದೆ ಅನುಸಾರ ವಿಚಾರಣೆಯನ್ನು 02 ತಿಂಗಳಲ್ಲಿ ಹಾಗೂ ಮೇಲ್ಮನವಿಯನ್ನು 06 ತಿಂಗಳಲ್ಲಿ ಇತ್ಯರ್ಥ ಪಡಿಸಲಾಗುವುದು.
ಬಹುತೇಕ ಪೋಕ್ಸೋ ಪ್ರಕರಣಗಳಲ್ಲಿ ಮಕ್ಕಳಿಗೆ ಹತ್ತಿರದವರೇ ಆರೋಪಿಗಳಾಗಿರುತ್ತಾರೆ. ಇದರಿಂದಾಗಿ ವಿಚಾರಣೆ ನಿಯಮಗಳು, ಅನುಸರಿಸಬೆಕಾದ ಕ್ರಮಗಳು, ದೌರ್ಜನ್ಯಕ್ಕೆ ಒಳಗಾದ ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು. ಅವರ ಆರೈಕೆ, ವೈದ್ಯಕೀಯ ಚಿಕಿತ್ಸೆ, ಪುನರ್ವಸತಿ, ಮಾಧ್ಯಮಗಳ ಜವಾಬ್ದಾರಿ, ಸಮಾಜದ ಕರ್ತವ್ಯಗಳು, ಪರಿಹಾರ ಒದಗಿಸಲು ನಿರ್ದಿಷ್ಟ ಕಾರ್ಯವಿಧಾನವನ್ನು ಎಲ್ಲಾ ಪೊಲೀಸ್ ಠಾಣೆಗಳಿಗೆ ಒದಗಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಾಸಕ ಛಲವಾದಿ ಟಿ.ನಾರಾಯಣಸ್ವಾಮಿ ಮಾತನಾಡಿ, ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಗಳಿಗೆ ಭಯ ಹುಟ್ಟಿಸುವ ರೀತಿ ಪೊಲೀಸ್ ಕಾರ್ಯಾಚರಣೆ ನಡೆಸಬೇಕು. ತಳ ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಮೂಡಿಸಬೇಕು ಎಂದರು.///