Belagavi News In Kannada | News Belgaum

ಗೋವಾ ಮದ್ಯ ಸಾಗಾಟ: ನಾಲ್ವರು ಪೊಲೀಸರ ವಶಕ್ಕೆ

ಕಾರವಾರ: ಹೊಸವರ್ಷದ ಸಂಭ್ರಮಾಚರಣೆ ಬಂತು ಎಂದರೆ ಸಾಕು ಮದ್ಯಪ್ರಿಯರಿಗೆ ಅದೇನೋ ಸಂಭ್ರಮ. ಹೀಗಾಗಿ ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಗೋವಾಮದ್ಯಕ್ಕೆ ಎಲ್ಲಿಲ್ಲದ ಬೇಡಿಕೆ. ಹೀಗಾಗಿ ಅಕ್ರಮ ಮದ್ಯ ಸಾಗಾಟದಾರರು ಗೋವಾದಿಂದ ಅಕ್ರಮವಾಗಿ ಕರ್ನಾಟಕದತ್ತ ಗೋವಾ ಮದ್ಯ ಸಾಗಾಟ ಮಾಡಿ ಕೋಟಿ ಕೋಟಿ ಹಣ ಮಾಡುತ್ತಾರೆ. ಈ ಬಗ್ಗೆ ಎಚ್ಚೆತ್ತುಕೊಂಡು ದಾಳಿ ಮಾಡಿರುವ ಅಬಕಾರಿ ಇಲಾಖೆ ಒಂದು ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮದ್ಯ ವಶಕ್ಕೆ ಪಡೆದಿದೆ.
ಇದೀಗ ಹೊಸ ವರ್ಷದ ಸಂಭ್ರಮಕ್ಕಾಗಿ ಬೆಂಗಳೂರು ಹಾಗೂ ಹೊನ್ನಾವರ ಭಾಗಕ್ಕೆ ದಾಖಲೆ ರಹಿತವಾಗಿ ಸಾಗಾಟ ಮಾಡುತಿದ್ದ ಗೋವಾ ಮದ್ಯವನ್ನು ಗೋವಾ-ಕರ್ನಾಟಕ ಗಡಿ ಭಾಗದ ಮಾಜಾಳಿಯಲ್ಲಿ ಕಾರವಾರದ ಅಬಕಾರಿ ಅಧಿಕಾರಿಗಳು ಸೀಜ್‌ ಮಾಡಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ.
ಮೊದಲ ಪ್ರಕರಣದಲ್ಲಿ ಹೊನ್ನಾವರ ಮೂಲದ ಮೂವರನ್ನು ವಶಕ್ಕೆ ಪಡೆದಿದ್ದು, ಈ ಪ್ರಕರಣದಲ್ಲಿ ಮದ್ಯ ಸಾಗಾಟಕ್ಕೆ ಬಳಸಿದ ಕಾರ್ ಹಾಗೂ 30.25 ಲೀಟರ್ ವಿವಿಧ ಬ್ರಾಂಡ್‍ನ ಮದ್ಯ ವಶಪಡಿಸಿಕೊಂಡು 12 ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಹೊನ್ನಾವರದ ಕೃಷ್ಣ, ಗಣೇಶ್ ಮೇಸ್ತಾ, ಕೀರ್ತಿ ಗಜಾನನ ನಾಯ್ಕ ಎಂಬುವವರನ್ನು ದಸ್ತಗಿರಿ ಮಾಡಲಾಗಿದೆ.
ಸಕ್ರಮ ಮದ್ಯದೊಂದಿಗೆ ಅಕ್ರಮ ಮದ್ಯ ಸಾಗಾಟ ಮಾಡಿದ ಪ್ರಕರಣದಲ್ಲಿ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಗೋವಾ, ಕರ್ನಾಟಕ ಮದ್ಯ ವಶಕ್ಕೆ ಪಡೆದು 400 ಬಾಕ್ಸ್‌ಗಳಲ್ಲಿ 1.17 ಕೋಟಿ ಮೌಲ್ಯದ 4,800 ಬಾಟಲ್ ಕರ್ನಾಟಕ ಮದ್ಯ, 9 ಬಾಕ್ಸ್‌ಗಳಲ್ಲಿ 29 ಸಾವಿರ ಮೌಲ್ಯದ 108 ಬಾಟಲ್ ಗೋವಾ ಮದ್ಯ ಸೀಜ್‌ ಮಾಡಿ ಬೆಂಗಳೂರು ಮೂಲದ ಲಾರಿ ಚಾಲಕ ನರಸಿಂಹರಾಜು ಎಲ್.ಡಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಕೆಎಸ್‍ಬಿಸಿಎಲ್‍ಗೆ ಪೂರೈಕೆಯಾಗುತ್ತಿದ್ದ ಸಕ್ರಮ ಮದ್ಯದ ಜೊತೆ ಗೋವಾದ ಅಕ್ರಮ ಮದ್ಯ ಸಾಗಾಟ ಮಾಡಲಾಗುತಿತ್ತು. ತಪಾಸಣೆ ವೇಳೆ ಸಕ್ರಮ ಮದ್ಯದೊಂದಿಗೆ ಅಕ್ರಮ ಗೋವಾ ಮದ್ಯ ಪತ್ತೆಯಾಗಿದೆ. ಅಕ್ರಮ ಮದ್ಯವನ್ನು ಅಬಕಾರಿ ಉಪ ಆಯುಕ್ತೆ ವನಜಾಕ್ಷಿ.ಎಂ ನೇತೃತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದ್ದು, ತನಿಖೆ ವೇಳೆ ಹೊಸವರ್ಷದ ಸಂಭ್ರಮಾಚರಣೆಗೆ ಈ ಮದ್ಯ ಬಳಸಲು ಕೊಂಡೊಯ್ಯುತ್ತಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕಾರವಾರ ಅಬಕಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.///////