Belagavi News In Kannada | News Belgaum

ಶಿಖರ್ಜಿ ಉಳಿಸಿ ಅಭಿಯಾನ: ಕಿತ್ತೂರಿನಲ್ಲಿ ಜೈನ ಸಮಾಜದಿಂದ ಪ್ರತಿಭಟನೆ

ಬೆಳಗಾವಿ: ಜೈನ ಸಮುದಾಯದ ತೀರ್ಥ ಕ್ಷೇತ್ರ ಎಂದು ಕರೆಸಿಕೊಳ್ಳುವ ಜಾರ್ಖಂಡ್ ರಾಜ್ಯದ ಸಮ್ಮೇದ ಶಿಖರ್ಜಿ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡದೇ ಅದರ ಪಾವಿತ್ರ್ಯತೆ ಕಾಪಾಡುವಂತೆ ಆಗ್ರಹಿಸಿ ಚನ್ನಮ್ಮನ ಕಿತ್ತೂರಿನಲ್ಲಿ ಜೈನ್‌ ಸಮಾಜದ ನೂರಾರು ಜನರು ಶಿಖರ್ಜಿ ಉಳಿಸಿ ಎಂಬ ಪ್ರತಿಭಟನಾ ರ‍್ಯಾಲಿ ನಡೆಸಿ ನಂತರ ತಹಶೀಲ್ದಾರ್‌ ಮೂಲಕ ಪ್ರಧಾನ ಮಂತ್ರಿಗೆ ಮನವಿ ರವಾನಿಸಿದರು.
ಇದಕ್ಕೂ ಮೊದಲು ಕಿತ್ತೂರಿನ  ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದ ಜೈನ ಸಮಾಜದ ಜನರು ನಂತರ ತಹಶೀಲ್ದಾರ್‌ ಕಚೇರಿ ಎದುರು ಜಮಾಯಿಸಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.

ಈ ವೇಳೆ ಜೈನ ಸಮಾಜದ ಮುಖಂಡ ದೇವೆಂದ್ರ ಪಾಟೀಲ ಮಾತನಾಡಿ,  ಶತಮಾನಗಳ ಹಿಂದೆಯೇ ಜಾರ್ಖಂಡ ರಾಜ್ಯದಲ್ಲಿನ ಸಮ್ಮೇದ ಶಿಖರ್ಜಿಯನ್ನು ಜೈನರ ಯಾತ್ರಾ ಸ್ಥಳವೆಂದು ಘೋಷಿಸಲಾಗಿದೆ. ಮೊಘಲ್‌ ಚಕ್ರವರ್ತಿ ಅಕ್ಬರ್‌ ಕೂಡ ಶಿಖರ್ಜಿ ಜೈನರ ತೀರ್ಥ ಕ್ಷೇತ್ರ ಎಂದು ಆದೇಶ ಹೊರಡಿಸಿದ್ದ. ಬ್ರಿಟೀಷರ ಕಾಲದಲ್ಲೂಇದನ್ನು ಒಪ್ಪಿಕೊಳ್ಳಲಾಗಿತ್ತು. ಜೈನರ ಪ್ರತಿರೋಧದ ನಡುವೆಯೂ ಜಾರ್ಖಂಡ್‌ ರಾಜ್ಯ ಸರಕಾರ ಈ ಪವಿತ್ರ ಸ್ಥಳವನ್ನು ಪ್ರವಾಸಿ ಸ್ಥಾನವೆಂದು ಘೋಷಿಸುವ ಮೂಲಕ ಅದನ್ನು ಅಪವಿತ್ರಗೊಳಿಸಲು ಮುಂದಾಗಿದೆ ಎಂದು ದೂರಿದರು.


ಇದನ್ನು ಪ್ರವಾಸಿ ತಾಣವನ್ನಾಗಿಸಿದರೆ ಅಲ್ಲಿ ಧಾರ್ಮಿಕತೆಗೆ ವಿರುದ್ಧವಾದ ಚಟುವಟಿಕೆ ನಡೆಯುತ್ತವೆ. ಇದರಿಂದ ಶಿಖರ್ಜಿಯ ಪಾವಿತ್ರ್ಯತೆ ಹಾಳಾಗುತ್ತದೆ. ಭವಿಷ್ಯದಲ್ಲಿ ಜೈನ ದೇಗುಲಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಜಾರ್ಖಂಡ್‌ ಸರಕಾರ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಗಿರಡಿ ಜಿಲ್ಲೆಯಲ್ಲಿ ಯಲ್ಲಿರುವ ಸಮ್ಮೇದ ಶಿಖರಜಿ ಪವಿತ್ರ 20 ತೀರ್ಥಂಕರರು ಮೋಕ್ಷ ಹೊಂದಿರುವ ಪವಿತ್ರ ಸ್ಥಳವಾಗಿದೆ. ಅಂತಹ ಧಾರ್ಮಿಕ ಮಹತ್ವದ ಸ್ಥಳವನ್ನು ಜಾರ್ಖಂಡ್‌ ಸರಕಾರ ಪ್ರವಾಸಿ ತಾಣವನ್ನಾಗಿ ಆದೇಶವನ್ನು ಹೊರಡಿಸಿದ್ದು ಖಂಡನೀಯ. ಪ್ರವಾಸಿ ತಾಣವಾದರೆ ಸಮ್ಮೇದ ಶಿಖರಜಿಯ ಪಾವಿತ್ರ್ಯತೆ ಹಾಳಾಗುತ್ತದೆ. ಕೂಡಲೇ ಆದೇಶ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ಶೀತಲ ಶಿರಗಾಪುರ, ಮಂಜುನಾಥ ದೊಡ್ಡಣ್ಣವರ, ಡಿ.ಆರ್.‌ ಪಾಟೀಲ, ಸುನೀಲ ಭಜಣ್ಣವರ, ತವನಪ್ಪಾ ಜಾಯಕಣ್ಣವರ, ತವನಪ್ಪ ಹತ್ತಲಕೇರಿ, ವಸಂತ ಪಾಟೀಲ, ಮಂಜುನಾಥ ಬಾಗೇವಾಡಿ, ಬಾಹುಬಲಿ ಕರಡಿ, ಲಕ್ಷ್ಮಣ ಪಾಟೀಲ, ರವಿಂದ್ರ ಇಂಗಳೆ ಸೇರಿದಂತೆ ನೂರಾರು ಜೈನ ಸಮುದಾಯದವರು ಭಾಗವಹಿಸಿದ್ದರು.

ಏನಿದು ಶಿಖರ್ಜಿ ಬೆಟ್ಟ?
ಸಮ್ಮೇದ ಶಿಖರ್ಜಿಯನ್ನು ಮೂರು ಸಾವಿರ ವರ್ಷಗಳಿಂದ ಜೈನರು ‘ಮಹಾತೀರ್ಥ’ ಎಂದು ಪರಿಗಣಿಸುತ್ತಾರೆ. ಏಕೆಂದರೆ ಜೈನ ಧರ್ಮದ 24 ತೀರ್ಥಂಕರರಲ್ಲಿ 20 ತೀರ್ಥಂಕರರು ಈ ಬೆಟ್ಟದಿಂದ ಮಹಾನಿರ್ವಾಣವನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತದೆ. ಯಾತ್ರಾರ್ಥಿಗಳು ಬರಿಗಾಲಿನಲ್ಲಿ ಬೆಟ್ಟವನ್ನು ಏರಿ 27 ಕಿಮೀ ‘ಪರಿಕ್ರಮ’ ಮಾಡುತ್ತಾರೆ. ಪರಿಕ್ರಮ ಮುಗಿಯುವವರೆಗೆ ಜೈನ ಯಾತ್ರಿಕರು ಆಹಾರ ಮತ್ತು ನೀರನ್ನು ಸೇವಿಸುವುದಿಲ್ಲ. ಜೈನರು ದೇಶಾದ್ಯಂತ ಅಲ್ಪಸಂಖ್ಯಾತರಾಗಿ ಉಳಿದುಕೊಂಡಿದ್ದು ಇವರ ಬೇಡಿಕೆಯನ್ನು ಈಡೇರಿಸಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.///////