Belagavi News In Kannada | News Belgaum

ಹುಬ್ಬಳ್ಳಿಯಲ್ಲಿ ನುಚಿರಾ ಸ್ಪೈಸಸ್ ಕಾರ್ಖಾನೆ ಉದ್ಘಾಟನೆ

ಹುಬ್ಬಳ್ಳಿ, ಜನವರಿ 4, 2023:ನುಚಿರಾ ಸ್ಪೈಸಸ್ ಪ್ರೈವೇಟ್ ಲಿಮಿಟೆಡ್, ಹುಬ್ಬಳ್ಳಿಯ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ತನ್ನ ಹೊಸ ತಯಾರಿಕಾ ಘಟಕವನ್ನು ಆರಂಭಿಸಿರುವುದಾಗಿ ಇಂದು ಇಲ್ಲಿ ಪ್ರಕಟಿಸಿದೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಈ ತಯಾರಿಕಾ ಘಟಕವನ್ನು ಉದ್ಘಾಟಿಸಿದರು.

 ‘ಎಚ್‌ಡಿಯುಡಿಎ’ ಮಾಜಿ ಅಧ್ಯಕ್ಷ ನಾಗೇಶ ಕಲ್ಬುರ್ಗಿ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಂಪನಿಯು ಮೆಣಸಿನ ಪುಡಿ ತಯಾರಿಸುವ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ. ಇದು ಪ್ರತಿ ದಿನಕ್ಕೆ 18 ಟನ್‌ಗಳಷ್ಟು ಮೆಣಸಿನ ಪುಡಿ ತಯಾರಿಸುವ ಸಾಮರ್ಥ್ಯ ಹೊಂದಿದೆ. ಅಮೆರಿಕ ಮತ್ತು ಯುರೋಪ್‌ನ ವಿವಿಧ ದೇಶಗಳಿಗೆ ರಫ್ತು ಮಾಡುವ ಗುರಿ ಹೊಂದಿದೆ.

ಕಂಪನಿಯು ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿ ರೂಪುಗೊಂಡಿದೆ. 2025ರ ವೇಳೆಗೆ ಕಂಪನಿಯ ಉದ್ಯೋಗಿಗಳ ಸಂಖ್ಯೆಯನ್ನು 100ಕ್ಕೆ ವಿಸ್ತರಿಸಲು ಯೋಜಿಸಿದೆ. ಈ ತಯಾರಿಕಾ ಘಟಕವು ಡಬ್ಲ್ಯು-53, 1ನೇ ಹಂತ , ಗಾಮನಗಟ್ಟಿ ಕೈಗಾರಿಕಾ ಪ್ರದೇಶ, ವುಮೆನ್ಸ್‌ ಪಾರ್ಕ್‌, ಹುಬ್ಬಳ್ಳಿ – ಈ ವಿಳಾಸದಲ್ಲಿ ಇದೆ.

ನುಚಿರಾ ಸ್ಪೈಸಸ್‌ನ ಗೋಕುಲ್ ಸೌದಾಗರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ‘ಕರ್ನಾಟಕದ ಹುಬ್ಬಳ್ಳಿಯಲ್ಲಿ ನಮ್ಮ ಕಾರ್ಖಾನೆ ಆರಂಭಿಸಲು ನಮಗೆ ಸಂತೋಷವಾಗುತ್ತಿದೆ. ನಾವು ರಫ್ತು ಆಧಾರಿತ ಮಸಾಲೆಗಳನ್ನು ತಯಾರಿಸುವ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದ್ದೇವೆ.

ನುಚಿರಾ ಸ್ಪೈಸಸ್‌ನಲ್ಲಿ, ಪ್ರಧಾನಮಂತ್ರಿ ಅವರ ‘ಭಾರತದಲ್ಲಿಯೇ ತಯಾರಿಸಿ’ ಧ್ಯೇಯೋದ್ದೇಶ ಸಾಕಾರಗೊಳಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ಉತ್ತಮ ಗುಣಮಟ್ಟದ ಮಸಾಲೆಗಳನ್ನು ತಯಾರಿಸುವ ಉದ್ದೇಶ ನಮ್ಮದಾಗಿದೆ. ಸಾಂಬಾರ ಪದಾರ್ಥಗಳನ್ನು ತಯಾರಿಸುವುದರ ಜೊತೆಗೆ, ಈ ಹೊಸ ತಯಾರಿಕಾ ಘಟಕವು ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳಿಗೆ ಉದ್ಯೋಗಾವಕಾಶಗಳನ್ನೂ ನೀಡಲಿದೆ’ ಎಂದು ಹೇಳಿದ್ದಾರೆ.