Belagavi News In Kannada | News Belgaum

ಸೆಂಟ್ರೋ ರವಿ ಮತ್ತೊಂದು ಕರಾಳ ಮುಖವಾಡ ಬಯಲು

ಮೈಸೂರು: ರಾಜಕಾರಣಿಗಳು, ಪೊಲೀಸರು, ಐಪಿಎಸ್‌ ಅಧಿಕಾರಿಗಳನ್ನು ನಾನಾ ಆಮಿಷಗಳ ಮೂಲಕ ಬಲೆಗೆ ಹಾಕಿಕೊಳ್ಳುವ ಚಾಣಾಕ್ಷತೆ ಮೆರೆಯುತ್ತಿದ್ದ ಮೈಸೂರಿನ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಮಹಿಳಾ ವೈದ್ಯರನ್ನೂ ಬಿಡುತ್ತಿರಲಿಲ್ಲ ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ.

ನೂರಾರು ಅಮಾಯಕ ಹೆಣ್ಮಕ್ಕಳು ಮತ್ತು ಮಹಿಳೆಯರನ್ನು ವೇಶ್ಯಾವಾಟಿಕೆಯ ಜಾಲಕ್ಕೆ ತಳ್ಳುತ್ತಿದ್ದ ಸ್ಯಾಂಟ್ರೋ ರವಿ ಅವರು ಗರ್ಭಿಣಿಯರಾದರೆ ಸಲೀಸಾಗಿ ಗರ್ಭಪಾತ ಮಾಡಿಸುವುದಕ್ಕೂ ಸಿಸ್ಟಮ್ಯಾಟಿಕ್‌ ವ್ಯವಸ್ಥೆಯನ್ನು ಹೊಂದಿದ್ದ ಎಂಬುದು ಈಗ ಬಯಲಾಗಿದೆ.

ಸ್ಯಾಂಟ್ರೋ ರವಿ ಕೆಲವೊಂದು ವೈದ್ಯರ ಜತೆಗೂ ಸಲುಗೆ ಮತ್ತು ಆತ್ಮೀಯತೆಯನ್ನು ಹೊಂದಿದ್ದು, ಅದನ್ನು ಬಳಸಿಕೊಂಡು ಹೆಣ್ಮಕ್ಕಳ ಗರ್ಭಪಾತಕ್ಕೆ ವ್ಯವಸ್ಥೆ ಮಾಡುತ್ತಿದ್ದ. ಈ ಮೂಲಕ ತನ್ನ ದುಷ್ಕೃತ್ಯಗಳಿಗೆ ವೈದ್ಯರನ್ನು ಕೂಡಾ ದುರ್ಬಳಕೆ ಮಾಡಿಕೊಂಡಿದ್ದ ಎನ್ನುವುದು ಸ್ಪಷ್ಟವಾಗಿದೆ.

ಮಹಿಳಾ ವೈದ್ಯರನ್ನು, ಪುರುಷ ವೈದ್ಯರನ್ನು ಹಣದ ಆಸೆ ತೋರಿಸಿ ಬುಕ್‌ ಮಾಡಿಕೊಳ್ಳುತ್ತಿದ್ದ. ಅವರಿಗೆ ಶುಭಾಶಯ ಕೋರುವುದು, ಅವರಿಗೆ ಬೇರೆ ಬೇರೆ ಆಮಿಷಗಳನ್ನು ಒಡ್ಡುವ ಮೂಲಕ ಆತ್ಮೀಯತೆಯನ್ನು ಸಂಪಾದಿಸುತ್ತಿದ್ದ ಎನ್ನಲಾಗಿದೆ.

ಹೈಟೆಕ್‌ ವೇಶ್ಯಾವಾಟಿಕೆಗೆ ಬಳಕೆಯಾಗುವ ಯುವತಿಯರು ಕೆಲವೊಮ್ಮೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೆ ಇದ್ದರೆ ಅಥವಾ ಗ್ರಾಹಕರು ಮುಂಜಾಗೃತಾ ಕ್ರಮಕ್ಕೆ ಅವಕಾಶ ನೀಡದೆ ಇದ್ದರೆ ಗರ್ಭಿಣಿಯಾಗುತ್ತಿದ್ದರು. ಆಗ ಅವರಿಗೆ ಧೈರ್ಯ ಹೇಳುತ್ತಿದ್ದ ಸ್ಯಾಂಟ್ರೋ ರವಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಸುಲಭವಾಗಿ ಗರ್ಭಪಾತ ಮಾಡಿಸುತ್ತಿದ್ದ.

ಹಾಗಂತ ಯಾವುದೇ ವೈದ್ಯರಿಗೂ ತಾನು ಇಂಥ ದಂಧೆ ಮಾಡುತ್ತಿದ್ದೇನೆ, ಅವರೆಲ್ಲ ಈ ಜಾಲದಲ್ಲಿರುವ ಹುಡುಗಿಯರು ಎನ್ನುವುದನ್ನು ತೋರ್ಪಡಿಸುತ್ತಿರಲಿಲ್ಲ. ತಾನೊಬ್ಬ ದೊಡ್ಡ ಸಮಾಜ ಸೇವಕ ಎಂದು ಪೋಸು ಕೊಡುತ್ತಿದ್ದ ಆತ, ತೊಂದರೆಯಲ್ಲಿರುವ, ಅನ್ಯಾಯಕ್ಕೆ, ದೌರ್ಜನ್ಯಕ್ಕೆ ಒಳಗಾದ ಹೆಣ್ಮಕ್ಕಳಿಗೆ ಸಹಾಯ ಮಾಡುತ್ತಿರುವುದಾಗಿ ಹೇಳಿ ಅವರ ಗೌರವವನ್ನೂ ಪಡೆದುಕೊಳ್ಳುತ್ತಿದ್ದ ಎನ್ನಲಾಗಿದೆ.

ಒಂದು ಬಾರಿ ಪರಿಚಯವಾದ ವೈದ್ಯರಿಂದ ಕನಿಷ್ಠ 5 ಜನರಿಗೆ ಮಾತ್ರ ಗರ್ಭಪಾತ ಮಾಡಿಸುತ್ತಿದ್ದ ಆತ ನಂತರ ಬೇರೊಬ್ಬ ವೈದ್ಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನಂತೆ.