Belagavi News In Kannada | News Belgaum

ಬಿಜೆಪಿ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ದೊಡ್ಡ ಕಳಂಕ: ಡಿಕೆಶಿ

ಬೆಳಗಾವಿ: ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿ ಸರ್ಕಾರ ನಮ್ಮ ರಾಜ್ಯಕ್ಕೆ ದೊಡ್ಡ ಕಳಂಕ ತಂದಿದೆ. ಆ ಕಳಂಕ ನಿರ್ಮೂಲನೆ ಮಾಡಲು ಪ್ರಜೆಗಳ ಧ್ವನಿ ತಿಳಿಸಲು ಹೊರಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಬಸ್‌ಯಾತ್ರೆ ಚಾಲನೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರು ಬ್ರಿಟಿಷ್‌ರನ್ನು ಓಡಿಸಲು ಈ ನಾಡಿನಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸ್ವೀಕರಿಸಿ ಹೋರಾಡಿದ್ದರು. ಅದಾದ ಮೇಲೆ ಪ್ರಜಾಪ್ರಭುತ್ವ ಬಂದು ಅಭಿವೃದ್ಧಿಶೀಲ ರಾಷ್ಟ್ರವಾಗಿದೆ ಎಂದು ತಿಳಿಸಿದರು.
ಐತಿಹಾಸಿಕವಾದ ಈ ಭೂಮಿಯಿಂದ ಪ್ರಜಾಧ್ವನಿ ಗ್ಯಾರಂಟಿ ಯಾತ್ರೆ ಆರಂಭವಾಗಿದೆ. ಈ ತಿಂಗಳು ಜಿಲ್ಲಾ ಕೇಂದ್ರಗಳನ್ನು ಮುಗಿಸಿ ಬಳಿಕ ಕ್ಷೇತ್ರವಾರು ಸಂಚಾರ ಮಾಡುತ್ತೇವೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸಂಚಾರ ಮಾಡುತ್ತೇವೆ. ಆಯಾ ಭಾಗಕ್ಕೆ ಹೋದಾಗ ಆಯಾ ನಾಯಕರು ಬರುತ್ತಾರೆ. 20 ಜಿಲ್ಲೆಗಳಲ್ಲಿ ನಾನು, ಸಿದ್ದರಾಮಯ್ಯ, ಹೆಚ್.ಕೆ.ಪಾಟೀಲ್ ಸೇರಿ ಹಿರಿಯ ನಾಯಕರು ಸಂಚರಿಸಿಸುತ್ತೇವೆ ಎಂದರು.
ಹೊಸಬರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಖಂಡಿತ ಹೊಸಬರಿಗೆ ಅವಕಾಶ ಕೊಡುತ್ತೇವೆ. ನವ ಕರ್ನಾಟಕಕ್ಕೆ ಕಾಂಗ್ರೆಸ್ ಸಂಕಲ್ಪ ಮಾಡುತ್ತಿದೆ. ಪಂಚಮಸಾಲಿ ಮೀಸಲಾತಿ ಬಗ್ಗೆ ಕೂಡಲಸಂಗಮ ಸ್ವಾಮೀಜಿ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ತುಪ್ಪವನ್ನು ತಲೆ ಮೇಲೆ ಇಟ್ಟಿದ್ದಾರೆ ಎಂದು ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರೆ. ಎಲ್ಲಾ ವರ್ಗಗಳನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು//////