Belagavi News In Kannada | News Belgaum

ಸಮಾನತೆ ಸಾರಿದ ಬಸವಣ್ಣನವರ ವಿಚಾರಗಳನ್ನು ರಕ್ಷಿಸುವ ಕಾರ್ಯ‌ವಾಗಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಬೈಲಹೊಂಗಲ: 12ನೇ ಶತಮಾನದಲ್ಲಿ ಇದ್ದ ಬಸವಣ್ಣನವರ ವಿರೋಧಿಗಳು ಇಂದಿಗೂ ಅವರ ವಿಚಾರಗಳನ್ನು ನಾಶಪಡಿಸುವ ಕೆಲಸದಲ್ಲಿ‌ ನಿರತರಾಗಿದ್ದಾರೆ. ಆದ್ದರಿಂದ ಸಮಾನತೆ ಸಾರಿದ ಬಸವಣ್ಣನವರ ವಿಚಾರಗಳನ್ನು ನಾವು ರಕ್ಷಿಸುವ ಕಾರ್ಯ‌ ಮಾಡಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ತಾಲೂಕಿನ ಚಿಕ್ಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೆಳವಿಯ ಶ್ರೀ ಶರಣ ಬಸವ ದೇವರ ‘ಬಸವ ಚರಿತಾಮೃತ’ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 12ನೇ ಶತಮಾಣದ ವಚನಕಾರರ ಪೈಕಿ ಬಸವಣ್ಣನವರಿಗೆ ದೊಡ್ಡ ಸ್ಥಾನವಿದೆ. ಅಕ್ಕ ಮಹಾದೇವಿ ,ಅಲ್ಲಮ ಪ್ರಭು ದಾರಿಯಲ್ಲೇ ಸಾಗಿದ್ದರೂ ಬಸವಣ್ಣನವರ ದೃಷ್ಟಿ ಮಾತ್ರ ವಿಭಿನ್ನವಾಗಿತ್ತು. ಹೀಗಾಗಿ ಬಸವಣ್ಣನವರ ವಚನಗಳು ಬಹಳಷ್ಟು ಪ್ರಸಿದ್ಧಿ ಪಡೆದಿವೆ. ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ನೀತಿಯನ್ನು ತಿಳಿಸುತ್ತವೆ ಎಂದು ಹೇಳಿದರು. 

ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಾರುವ ವಿಶ್ವ ಸಂವಿಧಾನವಾಗಿದ್ದು, ವಚನಗಳಲ್ಲಿರುವ ಅಂಶಗಳು ಸಂವಿಧಾನದ ಚೌಕಟ್ಟಿನಲ್ಲಿ ಕಾಣುತ್ತೇವೆ. ಪ್ರಪಂಚಕ್ಕೆ ಸಮಾನತೆ ಸಂದೇಶ ಸಾರುವ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊಟ್ಟ ಮೊದಲು ಬಾರಿ ಜಾಗತಿಕ ಪ್ರಪಂಚಕ್ಕೆ ಕೊಟ್ಟವರು, ಅದನ್ನು ಜಾರಿಗೆ ತಂದವರು ಅಣ್ಣ ಬಸವಣ್ಣನವರು ಎಂದು ತಿಳಿಸಿದರು. 

ಅನುಭವ ಮಂಟಪದ ಮೂಲಕ ಇಡೀ ಮನುಕುಲದ ಉದ್ಧಾರಕ್ಕಾಗಿ, ಸರ್ವರ ಕಲ್ಯಾಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಮತ್ತು ಶ್ರೇಯಸ್ಸು ಬಸವಣ್ಣನವರ ಆದಿಯಾಗಿ ಇಡೀ ಶರಣ ಸಂಕುಲಕ್ಕೆ ಸಲ್ಲುತ್ತದೆ.  ಜೊತೆಗೆ ಸಕಲ ಜೀವಾತ್ಮರೆಲ್ಲರಿಗೂ ಲೇಸು ಬಯಸಿದ ಜಗತ್ತಿನ ಮೊಟ್ಟ ಮೊದಲ ಸಮತವಾದಿ ಬಸವಣ್ಣನವರು ಎಂಬುದು ಯಾರು ಅಲ್ಲಗಳೆಯುವಂತಿಲ್ಲ. ಹಾಗಾಗಿ ಮೌಲ್ಯಾಧಾರಿತ ಸಾಮರಸ್ಯ ಸಮೃದ್ಧ ನಾಡು ಕಟ್ಟುವ ಕನಸು ಕಂಡು ಬಸವಣ್ಣನವರು, ಅದೇ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿಪಾದಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಮಠದ ಮಠಾಧೀಶರು ಹಾಗೂ ಚಿಕ್ಕೊಪ್ಪ ಗ್ರಾಮದ ಪ್ರಮುಖರು ಮುಖಂಡರು ಇದ್ದರು.///////