ದಡ್ಡಿ ಗ್ರಾಪಂ ಅಧ್ಯಕ್ಷರಾಗಿ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿತ ಹರೀಶ್ ಆಯ್ಕೆ

ಹುಕ್ಕೇರಿ:ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿ ತಾಲೂಕಿನ ದಡ್ಡಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಬಾಳು ರಾಯನ್ನವರ ಆಯ್ಕೆಯಾಗಿದ್ದಾರೆ.
ಗ್ರಾಪಂ ಕಾರ್ಯಾಲಯದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಹರೀಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ಹಿಡಕಲ್ ಡ್ಯಾಮ್ ಸಿಬಿಸಿ-೧ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ಹೊಸಮನಿ ಪ್ರಕಟಿಸಿದರು.
ಈ ಮೊದಲಿನ ಅಧ್ಯಕ್ಷರಾಗಿದ್ದ ಮುನಿರುದ್ದೀನ್ ಶೇಖ್ ಅವರ ವಿರುದ್ಧ ಅವಿಶ್ವಾಸ ಮಂಡಿಸಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಒಟ್ಟು ೧೪ ಸದಸ್ಯ ಬಲದ ಈ ಗ್ರಾಪಂನ ಅಧ್ಯಕ್ಷ ಚುನಾವಣೆಯಲ್ಲಿ ಎಲ್ಲಾ ಮತಗಳೂ ಚಲಾವಣೆಯಾಗಿದ್ದವು.
ನೂತನ ಅಧ್ಯಕ್ಷ ಹರೀಶ್ ೭ ಮತಗಳನ್ನು ಪಡೆದರೆ ತಮ್ಮ ಪ್ರತಿಸ್ಪರ್ಧಿ ಸೀಮಾ ಗಡಕರಿ ೬ ಮತಗಳನ್ನಷ್ಟೇ ಪಡೆಯಲು ಶಕ್ಯರಾದರು. ಒಂದು ಮತ ನೋಟಾ ಆಗಿದೆ.
ಈ ವೇಳೆ ಪಿಡಿಒ ಶಶಿಕಾಂತ ಹೊಸಮನಿ, ಸಿಬ್ಬಂದಿಗಳಾದ ಸಂತೋಷ ಹೊಳೆಪ್ಪಗೋಳ, ಬಸವರಾಜ ಜಾಂಬೋಟಿ, ಮುಖಂಡರಾದ ಕಿರಣ ರಜಪೂತ, ದಯಾನಂದ ಪಾಟೀಲ, ನಾಗೇಶ ನಾಯಿಕ, ಮಂಜು ಕಾಂಬಳೆ, ಕೃಷ್ಣಾ ಸುತಾರ ಮತ್ತಿತರರು ಉಪಸ್ಥಿತರಿದ್ದರು.//////