Belagavi News In Kannada | News Belgaum

ಅಕ್ರಮ ಸಂಬಂಧ ಶಂಕೆ: ಪತ್ನಿಯನ್ನು ಕತ್ತು ಹಿಸುಕಿ ಕೊಲೆ

ಬೆಂಗಳೂರು: ಅಕ್ರಮ ಸಂಬಂಧ ಶಂಕಿಸಿ ಪತಿಯೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದು, ಬಳಿಕ ಭಾಮೈದನಿಗೆ ಕೊಲೆ ಮಾಡಿರುವುದಾಗಿ ಸಂದೇಶ ಕಳುಹಿಸಿರುವ ಘಟನೆ ಸುದ್ದುಗುಂಟೆಪಾಳ್ಯ ಠಾಣೆ ವಾಪ್ತಿಯಲ್ಲಿ ನಡೆದಿದೆ.

ನಜ್ಮಾ ಖಾನ್‌(27) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಪತಿ ನಾಸೀರ್‌ ಹುಸೇನ್‌ (30) ಎಂಬಾತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳ ಮೂಲದ ನಾಸೀರ್‌ ಹುಸೇನ್‌ ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಸುಭಾಷ್‌ನಗರದಲ್ಲಿ ವಾಸವಾಗಿದ್ದ. ಖಾಸಗಿ ಕಂಪನಿಯಲ್ಲಿ ಲ್ಯಾಪ್‌ಟಾಪ್‌ ರಿಪೇರಿ ಕೆಲಸ ಮಾಡುತ್ತಿದ್ದ. ಜತೆಗೆ ಸುಭಾಷ್‌ನಗರದಲ್ಲಿ ಸಣ್ಣ ಕೊಠಡಿಯಲ್ಲಿಯೂ ಖಾಸಗಿಯಾಗಿ ಲ್ಯಾಪ್‌ ಟಾಪ್‌ ರಿಪೇರಿ ಮಾಡುತ್ತಿದ್ದ.

ಇದೇ ವೇಳೆ ಕೊಠಡಿಯ ಮನೆ ಮುಂದೆ ವಾಸವಾಗಿದ್ದ ನಜ್ಮಾ ಖಾನ್‌ರನ್ನು ಪ್ರೀತಿಸಿದ್ದು, ಆರು ತಿಂಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಸುಭಾಷ್‌ ನಗರದಲ್ಲೇ ದಂಪತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಈ ಮಧ್ಯೆ ನಾಲ್ಕು ತಿಂಗಳಿಂದ “ನಿನ್ನ ಸಹೋದರಿ ಪತಿ ಜತೆ ಅಕ್ರಮ ಸಂಬಂಧ ಹೊಂದಿದ್ದಿಯಾ?’ ಎಂದು ನಿತ್ಯ ಜಗಳ ನಡೆಸುತ್ತಿದ್ದ. ಹೀಗಾಗಿ ಒಂದು ತಿಂಗಳ ಹಿಂದಷ್ಟೇ ಸುದ್ದುಗುಂಟೆಪಾಳ್ಯ ಠಾಣೆ ವ್ಯಾಪ್ತಿಯ ತಾವರೆಕೆರೆ ಮುಖ್ಯರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಆದರೂ ಪತ್ನಿ ಮೇಲೆ ನಿತ್ಯ ಹಲ್ಲೆ ನಡೆಸುತ್ತಿದ್ದ.

ಇತ್ತೀಚೆಗಷ್ಟೇ ಆಕೆ ಗರ್ಭಿಣಿಯಗಿದ್ದಳು ಎಂದು ಹೇಳಲಾಗಿದೆ. ಅದಕ್ಕೆ “ನಾನು ಕಾರಣನಲ್ಲ. ನೀನು ಬೇರೆಯೊಬ್ಬರ ಜತೆ ಅಕ್ರಮ ಸಂಬಂಧ ಹೊಂದಿರುವೆ’ ಎಂದು ಆರೋಪಿ ಹಲ್ಲೆ ನಡೆಸಿದ್ದಾನೆ.  ಭಾನುವಾರ ರಾತ್ರಿಯೂ ಜಗಳ ತೆಗೆದು, ಅದು ವಿಕೋಪಕ್ಕೆ ಹೋದಾಗ, ಕುತ್ತಿಗೆ ಹಿಸುಕಿ ಮತ್ತು ಉಸಿರುಗಟ್ಟಿಸಿ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.