Belagavi News In Kannada | News Belgaum

ಹುಕ್ಕೇರಿ: ಇನ್ಮುಂದೆ ಅವರಗೋಳ ಮದ್ಯ ಮುಕ್ತ ಗ್ರಾಮ

ಹುಕ್ಕೇರಿ: ತಾಲೂಕಿನ ಅವರಗೋಳ ಗ್ರಾಮವನ್ನು ಇನ್ನು ಮುಂದೆ ಮದ್ಯ ಮುಕ್ತ ಗ್ರಾಮ ಎಂದು ಘೋಷಿಸಲಾಗಿದೆ.
ಗ್ರಾಮದ ಲಕ್ಷ್ಮೀ ದೇವಿ ದೇವಸ್ಥಾನದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಸಾರಾಯಿ ಮುಕ್ತ ಗ್ರಾಮ ಅಭಿಯಾನಕ್ಕೆ ಗ್ರಾಪಂ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ ನ್ಯಾಯ ಸಮಿತಿ ಸದಸ್ಯರು, ಮಹಿಳೆರಾದಿಯಾಗಿ ಗ್ರಾಮಸ್ಥರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಇನ್ನು ಮುಂದೆ ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುವಂತಿಲ್ಲ. ಹಾಗೆಯೇ ಮದ್ಯವಸನಿಗಳು ಸಾರಾಯಿ ತಂದು ಸೇವಿಸುವಂತಿಲ್ಲ. ಯಾವುದೇ ಕಾರಣಕ್ಕೂ ಅಕ್ರಮ ಸಾರಾಯಿ ಮಾರಾಟ ಮತ್ತು ಸೇವನೆಯ ಹಾವಳಿ ಪುನರಾವರ್ತನೆಯಾಗಬಾರದು. ಒಂದು ವೇಳೆ ಈ ನಿರ್ಧಾರವನ್ನು ಉಲ್ಲಂಘಿಸುವವರ ಮೇಲೆ ಪೊಲೀಸ್ ಮತ್ತು ಅಬಕಾರಿ ಇಲಾಖೆಯವರು ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.
ಯುವ ಮುಖಂಡ ವಿಠ್ಠಲ ಮಾದರ ಮಾತನಾಡಿ, ಗ್ರಾಮದ ಪಾನ್, ಕಿರಾಣಿ, ಹೊಟೇಲ್‌ಗಳಲ್ಲಿ ಸುಲಭವಾಗಿ ಅಕ್ರಮ ಹಾಗೂ ಕಳಪೆ ಮಟ್ಟದ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಸಂಜೆ ಹೊತ್ತಿನಲ್ಲಿ ಮಹಿಳೆಯರು, ವಯೋವೃದ್ಧರು ಸಂಚರಿಸುವುದು ದುಸ್ತರವಾಗಿದೆ. ಕುಡಿತದ ಚಟದಿಂದ ಇತ್ತೀಚೆಗಷ್ಟೇ ಒಂದೇ ದಿನದಲ್ಲಿ ಗ್ರಾಮದ ಇಬ್ಬರು ಸಾವನ್ನಪ್ಪಿದ್ದು ಅವರ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ. ಗ್ರಾಮಸ್ಥರು ಮತ್ತು ವಿವಿಧ ಇಲಾಖೆಗಳ ಸಹಕಾರದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಗ್ರಾಪಂ ಮಾಜಿ ಸದಸ್ಯ ಸುರೇಶ ಸರನಾಯಕ ಮಾತನಾಡಿ, ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ, ಸೇವನೆ ಮೀತಿಮಿರಿದೆ. ಇದರಿಂದ ಅನೇಕ ಬಡ ಹಾಗೂ ಮಧ್ಯಮ ಕುಟುಂಬಗಳು ಬೀದಿಪಾಲಾಗಿವೆ. ಕುಡಕರ ಹಾವಳಿಯಿಂದ ಮರ್ಯಾದಸ್ಥರಿಗೆ ತೀವ್ರ ಮುಜುಗರವಾಗುತ್ತಿದೆ. ಈ ಹಿನ್ನಲೆಯಲ್ಲಿ ಗ್ರಾಮವನ್ನು ಸಾರಾಯಿ ಮುಕ್ತ ಮಾಡಲು ಪಣ ತೊಡಲಾಗಿದೆ ಎಂದರು.
ಶಾಲಾ ಮಕ್ಕಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾರಾಯಿ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಪರೇಡ್ ನಡೆಸಿ ಜಾಗೃತಿ ಮೂಡಿಸಲಾಯಿತು. ಗ್ರಾಮಸ್ಥರು ಮುತುರ್ವಜಿಯಿಂದ ಏರ್ಪಡಿಸಿದ್ದ ಈ ಅಭಿಯಾನದಲ್ಲಿ ತಹಸೀಲದಾರ ಡಾ.ಡಿ.ಎಚ್.ಹೂಗಾರ ಗೈರು ಹಾಜರಾಗಿದ್ದು ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.
ಅಬಕಾರಿ ಇಲಾಖೆಯ ಉಪ ನಿರೀಕ್ಷಕ ಡಿ.ಸುನೀಲಕುಮಾರ, ಪೊಲೀಸ್ ಇಲಾಖೆಯ ಎಎಸ್‌ಐ ಕೆ.ಎನ್.ಪಿಂಜಾರ, ಹವಾಲ್ದಾರ ಎಸ್.ಎಂ.ಕದಂ, ಪಿಡಿಒ ಮಹಾದೇವ ಜಿನರಾಳ, ಮುಖಂಡರಾದ ಮುತ್ತು ಸರನಾಯಕ, ಸದಾ ಮೈಲಾಖೆ, ಮೌನೇಶ ಬಡಿಗೇರ, ಶಿವಲಿಂಗಯ್ಯ ಮಠಪತಿ, ಅಡಿವೆಪ್ಪಾ ಅಂಕಲಗಿ, ಮಾರುತಿ ದೇವುಗೋಳ, ವೆಂಕಣ್ಣ ಸರನಾಯಕ ಮತ್ತಿತರರು ಉಪಸ್ಥಿತರಿದ್ದರು./////