ಬಳ್ಳಾರಿಯಲ್ಲಿ ತಲೆ ಎತ್ತಲಿದೆ 23 ಅಡಿ ಎತ್ತರದ ಅಪ್ಪು ಪುತ್ಥಳಿ

ಬಳ್ಳಾರಿ: ಜನವರಿ 21ರಂದಿ ಬಳ್ಳಾರಿ ಉತ್ಸವ ನಡೆಯಲಿದ್ದು, ಅಂದೇ 23 ಅಡಿ ಎತ್ತರದ ಡಾ.ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣಗೊಳ್ಳಲಿದೆ.
ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರುವ ಡಾ.ಪುನೀತ್ ರಾಜ್‍ಕುಮಾರ್ ಅಂದರೆ ಬಳ್ಳಾರಿ ಜನರಿಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಅಪ್ಪು ಇಹಲೋಕವನ್ನು ತ್ಯಜಿಸಿದಾಗ ಇಲ್ಲಿನ ಜನರು ತಮ್ಮ ಮನೆಯ ಮಗನನ್ನೇ ಕಳೆದುಕೊಂಡ ಹಾಗೆ ದುಃಖಿತರಾಗಿದ್ದರು.
ಈಗ ಪ್ರೀತಿ, ಅಭಿಮಾನಕ್ಕೆ ಸಾಕ್ಷಿಯಾಗಿ ಗಣಿನಾಡು ಬಳ್ಳಾರಿಯಲ್ಲಿ ಪುನೀತ್ ರಾಜ್ಕುಮಾರ್ ಅವರ ಬೃಹತ್ ಪುತ್ಥಳಿ ತಲೆ ಎತ್ತಲಿದೆ. ಬಳ್ಳಾರಿ ಜಿಲ್ಲಾ ಕ್ರೀಡಾಂಗಣದ ಮುಂದೆ ಕಬ್ಬಿಣ ಹಾಗೂ ಫೈಬರ್ ಮಿಶ್ರಣದಲ್ಲಿ ಮೂಡಿ ಬಂದಿರುವ 23 ಅಡಿ ಎತ್ತರದ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. 23 ಅಡಿ ಎತ್ತರದ ಈ ಪುತ್ಥಳಿ ಅತೀ ದೊಡ್ಡ ಪುತ್ಥಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಜನವರಿ 21 ರಂದು ಬಳ್ಳಾರಿ ಉತ್ಸವ: ಜನವರಿ 21 ರಂದು ನಡೆಯುವ ಬಳ್ಳಾರಿ ಉತ್ಸವ ಸಂದರ್ಭದಲ್ಲಿ ಅಪ್ಪು ಅವರ ಪುತ್ಥಳಿಯನ್ನು ಲೋಕಾರ್ಪಣೆ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಬಳ್ಳಾರಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಶಿವಮೊಗ್ಗದ ಪ್ರಖ್ಯಾತ ಜೀವನ್ ಶಿಲ್ಪಿ ಮತ್ತು ತಂಡದವರು ಪುನೀತ್ ರಾಜ್ಕುಮಾರ್ ಅವರ ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಸತತ ಐದು ತಿಂಗಳು 15 ಜನ ಸೇರಿ ಪುತ್ಥಳಿಯನ್ನು ತಯಾರಿಸಿದ್ದಾರೆ. 20 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಪುತ್ಥಳಿ ನಿರ್ಮಾಣವಾಗಿದ್ದು, ಇದು ಮೂರು ಸಾವಿರ ಕೆ.ಜಿ. ತೂಕ ಹೊಂದಿದೆ. ಮೊದಲಿಗೆ ಮಣ್ಣಿನಲ್ಲಿ ತಯಾರಿಸಿ ಮೌಲ್ಡ್ ಮಾಡಿ, ನಂತರ ಪ್ರತಿಮೆ ಮಾಡಲಾಗಿದೆ.
ಶಿವಮೊಗ್ಗದಲ್ಲಿ ತಯಾರಾದ ಅಪ್ಪು ಪುತ್ಥಳಿ: ಶಿವಮೊಗ್ಗದ ನಿದಿಗೆ ಬಳಿ ಪ್ರತಿಮೆಯನ್ನು ಮಾಡಿ ಈಗ ಬಳ್ಳಾರಿಗೆ ಕಳುಹಿಸಿದ್ದಾರೆ. ಪ್ರತಿಮೆಯನ್ನು ಸಾಗಿಸಲು 40 ಅಡಿ ಉದ್ದದ ಹಾಗೂ 20 ಚಕ್ರದ ಲಾರಿ ಬಳಸಲಾಗಿತ್ತು. ಬೃಹತ್ ಕ್ರೇನ್‍ಗಳನ್ನು ಬಳಸಿ ಲಾರಿಗೆ ಪ್ರತಿಮೆಯನ್ನು ಇರಿಸಿ ಬಳ್ಳಾರಿಗೆ ತೆಗೆದುಕೊಂಡು ಬರಲಾಗಿದೆ. ಜನವರಿ 21ರಂದು ಬಳ್ಳಾರಿ ಉತ್ಸವದಂದು ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಕೆರೆಯ ಪಕ್ಕದಲ್ಲಿ 23 ಅಡಿ ಎತ್ತರದ ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅವರ ಪುತ್ಥಳಿ ಅನಾವರಣಗೊಳಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ತಿಳಿಸಿದರು.//////