Belagavi News In Kannada | News Belgaum

ಜ. 26ಕ್ಕೆ ಕಾಂಗ್ರೆಸ್‌ನಿಂದ ಹಾತ್ ಸೇ ಹಾತ್ ಜೋಡೋ ಹೊಸ ಅಭಿಯಾನ ಆರಂಭ

ನವದೆಹಲಿ: ಮುಂಬರುವ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳಿಗೆ ಸಿದ್ಧವಾಗುತ್ತಿರುವ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಬೆನ್ನಲ್ಲೇ ಹೊಸ ಅಭಿಯಾನ ಆರಂಭಿಸಿದೆ.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ‘ಹಾತ್ ಸೇ ಹಾತ್ ಜೋಡೋ’ (ಕೈಯಿಂದ ಕೈ ಜೋಡಿಸಿ) ಅಭಿಯಾನದ ಲೋಗೋ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಯಾತ್ರೆಯ ಉದ್ದೇಶವನ್ನು ಜನರಿಗೆ ತಿಳಿಸಬೇಕಿದೆ. ಈ ಹಿನ್ನೆಲೆ ಜನರ ಮನೆಗಳನ್ನು ತಲುಪಲು ‘ಹಾತ್ ಸೇ ಹಾತ್ ಜೋಡೋ’ ಅಭಿಯಾನ ಆರಂಭಿಸಿದ್ದು, ಇದೇ ಜ. 26 ರಿಂದ ಅಭಿಯಾನ ಆರಂಭವಾಗಲಿದೆ ಎಂದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ‘ಹಾತ್ ಸೇ ಹಾತ್ ಜೋಡೋ’ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಮೊದಲ ಹಂತದಲ್ಲಿ ಗ್ರಾಮ ಮತ್ತು ಬ್ಲಾಕ್ ಮಟ್ಟದಲ್ಲಿ, ಎರಡನೇ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಮತ್ತು ಮೂರನೇ ಹಂತದಲ್ಲಿ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದೇ ವೇಳೆ ಬಿಜೆಪಿ ಆಡಳಿತ ವೈಫಲ್ಯಗಳ ಬಗ್ಗೆ ಜಾರ್ಜ್‍ಶೀಟ್ ಸಿದ್ಧಪಡಿಸಿದ್ದು ಅವುಗಳನ್ನು ಜನರಿಗೆ ತಲುಪಿಸುತ್ತೇವೆ ಮತ್ತು ಕಾಂಗ್ರೆಸ್ ಉದ್ದೇಶಗಳನ್ನು ಮನವರಿಕೆ ಮಾಡಿಕೊಡುತ್ತೇವೆ. ಇದಕ್ಕೆ ಭಾರತ್ ಜೋಡೋದಂತೆ ಅಭೂತಪೂರ್ವ ಬೆಂಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.//////