ಗಾಂಜಾ ನಶೆಯಲ್ಲಿದ್ದ ವೈದ್ಯರು ಸೇರಿ 9 ಜನ ಅರೆಸ್ಟ್

ಮಂಗಳೂರು: ಶಿಕ್ಷಣ ಕಾಶಿ ಮಂಗಳೂರಿನಲ್ಲಿ ವೈದ್ಯರ ಗಾಂಜಾ ಘಾಟಿನ ನಶೆ ಇನ್ನೂ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಪೊಲೀಸರು ಕೆದಕಿದಷ್ಟು ಹೆಚ್ಚು ಮಂದಿ ಈ ಪ್ರಕರಣದಲ್ಲಿ ಬಲೆಗೆ ಬೀಳುತ್ತಿದ್ದಾರೆ. ವೈದ್ಯರ ಗಾಂಜಾ ಘಾಟಿನ ಹಿಂದೆ ಬಿದ್ದ ಪೊಲೀಸರು ಇದೀಗ ಮತ್ತೆ 9 ಮಂದಿಯನ್ನು ಬಂಧಿಸಿದ್ದಾರೆ.
ಡಾ. ಸಿದ್ದಾರ್ಥ್ ಪಾವಸ್ಕರ್, ಡಾ. ಸೂರ್ಯಜಿತ್ ದೇವ್, ಡಾ. ಪ್ರಣಯ್ ನಟರಾಜ್, ಡಾ. ಚೈತನ್ಯ ತುಮುಲುರಿ, ಡಾ. ಸುಧೀಂದ್ರ, ಡಾ. ಇಶ್ ಮಿಡ್ಡಾ, ಡಾ. ವಿದುಷ್ ಕುಮಾರ್, ಡಾ. ಶರಣ್ಯಾ, ಡಾ. ಆಯಿಷಾ ಮಹಮ್ಮದ್ ಬಂಧಿತ ಆರೋಪಿಗಳು. ಇವರೆಲ್ಲರೂ ಕೆಎಂಸಿ ವೈದ್ಯಕೀಯ ಕಾಲೇಜು, ಶ್ರೀನಿವಾಸ್ ಆಸ್ಪತ್ರೆ, ದುರ್ಗಾ ಸಂಜೀವಿನಿ ಸಂಸ್ಥೆಯಲ್ಲಿ ವೈದ್ಯಕೀಯ ಪದವಿ ಪಡೆಯುತ್ತಿದ್ದಾರೆ. ಡಾ. ಶರಣ್ಯಾ ಬಿಡಿಎಸ್ ವಿದ್ಯಾರ್ಥಿನಿಯಾಗಿದ್ದರೆ, ಉಳಿದವರು ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದಾರೆ.
ಬಂಧಿತರಲ್ಲಿ ಇಬ್ಬರು ವೈದ್ಯರು, 7 ಮಂದಿ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ. ಈ ಗಾಂಜಾ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಡಾ. ಕಿಶೋರಿಲಾಲ್ ರಾಮ್ ಜೀಯೊಂದಿಗೆ ಸಂಪರ್ಕ ಹೊಂದಿದ್ದ ಗಾಂಜಾ ಪೆಡ್ಲರ್ಗಳು ಕೆಲವರು ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾರೆ.
ಪ್ರಕರಣದ ಬಗ್ಗೆ ಮಂಗಳೂರು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಬಂಧಿತರಲ್ಲಿ ಎಲ್ಲರಿಗೂ ಪಾಸಿಟಿವ್ ಬಂದಿದೆ. ಬಂಧಿತರಿಂದಲೇ ಮಾಹಿತಿ ಕಲೆಹಾಕಿ ಪೊಲೀಸರು ಪ್ರಕರಣದ ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.