ಗೋವಾಗೆ ಬರುತ್ತಿದ್ದ ವಿಮಾನಕ್ಕೆ ಬಾಂಬ್ ದಾಳಿ ಬೆದರಿಕೆ

ಪಣಜಿ: ರಷ್ಯಾದ ಮಾಸ್ಕೋದಿಂದ ಗೋವಾಗೆ ಬರುತ್ತಿದ್ದ ವಿಮಾನಕ್ಕೆ ಬಾಂಬ್ ದಾಳಿ ಬೆದರಿಕೆಯೊಡ್ಡಲಾಗಿದ್ದು, ಉಜ್ಬೇಕಿಸ್ತಾನ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಸೂಚಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವಿವಿಧ ಮಾಧ್ಯಮಗಳು ವರದಿ ಮಾಡಿವೆ.
ಗೋವಾ ವಿಮಾನ ನಿಲ್ದಾಣ ನಿರ್ದೇಶಕರಿಗೆ ಇ-ಮೇಲ್ ಮೂಲಕ ಬಾಂಬ್ ದಾಳಿ ಬೆದರಿಕೆ ಸಂದೇಶ ಬಂದಿತ್ತು. ತಕ್ಷಣವೇ 247 ಪ್ರಯಾಣಿಕರನ್ನು ಒಳಗೊಂಡ ‘ದಿ ಅಜುರ್ ಏರ್’ ವಿಮಾನವನ್ನು ಉಜ್ಬೇಕಿಸ್ತಾನ ವಿಮಾನ ನಿಲ್ದಾಣದತ್ತ ಕಳುಹಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಮಾಸ್ಕೋದಿಂದ ಗೋವಾಗೆ ಆಗಮಿಸುವ ವಿಮಾನಗಳಿಗೆ ಬಾಂಬ್ ದಾಳಿ ಬೆದರಿಕೆ ಬರುತ್ತಿರುವುದು ಇದು ತಿಂಗಳಲ್ಲಿ ಎರಡನೇ ಪ್ರಕರಣವಾಗಿದೆ. ‘ದಿ ಅಜುರ್ ಏರ್’ ವಿಮಾನ ನಿಗದಿಯಂತೆ ಮುಂಜಾವ 4.15ಕ್ಕೆ ಗೋವಾದ ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಿತ್ತು. ಆದರೆ, ಭಾರತದ ವಾಯು ಗಡಿ ಪ್ರವೇಶಿಸುವುದಕ್ಕೂ ಮುನ್ನ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಗೊತ್ತಾಯಿತು. ಹೀಗಾಗಿ ಉಜ್ಬೇಕಿಸ್ತಾನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು.
ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಸಂದೇಶವುಳ್ಳ ಇ-ಮೇಲ್ ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕರಿಗೆ ತಡರಾತ್ರಿ ಸುಮಾರು 12.30ಕ್ಕೆ ಬಂದಿದೆ. ತಕ್ಷಣವೇ ವಿಮಾನದ ತುರ್ತು ಲ್ಯಾಂಡಿಂಗ್ಗೆ ಸೂಚನೆ ಕಳುಹಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ./////