ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಲ್ಲ ಎಂದ ಬಿ.ಎಸ್. ಯಡಿಯೂರಪ್ಪ

ಬೆಳಗಾವಿ: ಯಾವುದೇ ಕಾರಣಕ್ಕೂ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಭವಿಷ್ಯ ಹೇಳುತ್ತಿಲ್ಲ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲ. ಮೈಸೂರಿಗೆ ಬರಲು ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಪ್ರಕಾರ ಅವರು ಕೋಲಾರದಲ್ಲಿ ನಿಲ್ಲುವುದಿಲ್ಲ, ಮೈಸೂರಿಗೆ ಹೋಗಬಹುದು. ಅದಾದ ಬಳಿಕ ಮುಂದಿನ ಸ್ಟ್ಯಾಟರ್ಜಿ ಮಾಡಬೇಕು ಮಾಡುತ್ತೇವೆ. ಸಿದ್ದರಾಮಯ್ಯ ಎರಡು ಕಡೆಯಾದ್ರೂ ಸ್ಪರ್ಧೆ ಮಾಡಲಿ, ಮೂರು ಕಡೆಯಾದ್ರೂ ಮಾಡಲಿ ಮನೆಗೆ ಹೋಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಬಿಜೆಪಿಯಲ್ಲಿ ಮಾಸ್ ಲೀಡರ್ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಪಾರ್ಟಿಯಲ್ಲಿ ಯಾರು ಮಾಸ್ ಲೀಡರ್ ಇದ್ದಾರೆ. ನಮಗಾದ್ರೂ ಪ್ರಧಾನಿ ನರೇಂದ್ರ ಮೋದಿ ಅಂತಾ ಒಬ್ಬ ಮಹಾನ್ ನಾಯಕ ಇದ್ದಾರೆ. ಅವರು ರಾಹುಲ್ ಗಾಂಧಿ ಹಿಡಿದುಕೊಂಡು ಓಡಾಡುತ್ತಾರಾ? ಅವರಿಗೆ ಯಾರಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ, ಮತ್ತೆ ಯಾಕೆ ಎಲ್ಲಾ ರಾಜ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈ ರೀತಿ ಹೇಳಿಕೆಗಳಿಂದ ಅವರು ಏನೂ ಸಾಧನೆ ಮಾಡಲು ಆಗಲ್ಲ. ನೂರಕ್ಕೆ ನೂರು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು./////