ಪ್ರಕಾಶ್ ಅಂಬೇಡ್ಕರ್ ಪಕ್ಷದ ಜತೆ ಮೈತ್ರಿ ಘೋಷಿಸಿದ ಉದ್ಧವ್ ಠಾಕ್ರೆ

ಮಹಾರಾಷ್ಟ್ರ: ಮುಂಬೈ ನಗರಪಾಲಿಕೆ ಚುನಾವಣೆಗೂ ಮುನ್ನ ಶಿವಸೇನೆಯ ಉದ್ಧವ್ ಠಾಕ್ರೆ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ ಪಕ್ಷದ ಜೊತೆ ಮೈತ್ರಿ ಘೋಷಿಸಿದ್ದಾರೆ.
ಇದೀಗ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದ್ದು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ. ಮುಂಬರುವ ಮುಂಬೈ ನಗರಪಾಲಿಕೆ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಶಿವಸೇನೆ ವಿಭಜನೆಯಾದ ನಂತರ ಇದು ಮೊದಲ ಪ್ರಮುಖ ಚುನಾವಣೆಯಾಗಿದೆ.
ಉದ್ಧವ್ ಠಾಕ್ರೆ ಅವರು ಭಾರತದ ಸಂವಿಧಾನವನ್ನು ರಚಿಸಿದ ಭೀಮ್ ರಾವ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರೊಂದಿಗೆ ಎರಡು ತಿಂಗಳಿನಿಂದ ಮಾತುಕತೆ ನಡೆಸುತ್ತಿದ್ದಾರೆ. ಇಂದು ಜನವರಿ 23, ಬಾಳಾಸಾಹೇಬ್ ಠಾಕ್ರೆ ಅವರ ಜನ್ಮದಿನ. ಮಹಾರಾಷ್ಟ್ರದ ಹಲವಾರು ಜನರು ನಾವು ಒಗ್ಗೂಡಬೇಕೆಂದು ಬಯಸಿದ್ದಕ್ಕಾಗಿ ನನಗೆ ತೃಪ್ತಿ ಮತ್ತು ಸಂತೋಷವಾಗಿದೆ. ಪ್ರಕಾಶ್ ಅಂಬೇಡ್ಕರ್ ಮತ್ತು ನಾನು ಇಂದು ಮೈತ್ರಿ ಮಾಡಿಕೊಳ್ಳಲು ಬಂದಿದ್ದೇವೆ ಎಂದು ಶ್ರೀ ಠಾಕ್ರೆ ಸುದ್ದಿಗಾರರಿಗೆ ತಿಳಿಸಿದರು.
ನನ್ನ ತಾತ ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ಅಜ್ಜ ಸಹೋದ್ಯೋಗಿಗಳಾಗಿದ್ದರು ಮತ್ತು ಅವರು ಸಾಮಾಜಿಕ ಸಮಸ್ಯೆಗಳ ವಿರುದ್ಧ ಆ ಸಮಯದಲ್ಲಿ ಹೋರಾಡಿದರು. ಠಾಕ್ರೆ ಮತ್ತು ಅಂಬೇಡ್ಕರ್ ಅವರಿಗೆ ಇತಿಹಾಸವಿದೆ. ಈಗ ಅವರ ಮುಂದಿನ ಪೀಳಿಗೆಗಳು ದೇಶದ ಪ್ರಸ್ತುತ ಸಮಸ್ಯೆಗಳ ಬಗ್ಗೆ ಹೋರಾಡಲು ಇಲ್ಲಿದ್ದಾರೆ ಎಂದು ಹೇಳಿದರು.
ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ಈ ಮೈತ್ರಿಯು ಆಡಳಿತಾರೂಢ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ತಂತ್ರಗಳನ್ನು ಎದುರಿಸಲಿದೆ. ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರ ತಂದೆ ಪ್ರಬೋಧಂಕರ್ ಠಾಕ್ರೆ ಅವರಿಗೆ ಮೀಸಲಾಗಿರುವ ವೆಬ್ಸೈಟ್ ಪ್ರಬೋಧಂಕರ್ ಡಾಟ್ ಕಾಮ್ ಬಿಡುಗಡೆಗಾಗಿ ಠಾಕ್ರೆ ಮತ್ತು ಅಂಬೇಡ್ಕರ್ ಕಳೆದ ನವೆಂಬರ್ನಲ್ಲಿ ವೇದಿಕೆಯನ್ನು ಹಂಚಿಕೊಂಡಿದ್ದರು.//////