ವಿಧವೆ ತಾಯಿಗೆ ತಾನೇ ಮುಂದೆ ನಿಂತು ಮರುಮದುವೆ ಮಾಡಿಸಿದ ಮಗ

ಮುಂಬೈ: ಸಮಾಜದ ಕಟ್ಟುಪಾಡುಗಳಿಗೆ ಶೆಡ್ಡು ಹೊಡೆದು ವ್ಯಕ್ತಿಯೊಬ್ಬ ತಾನೇ ಮುಂದೆ ನಿಂತು ತನ್ನ ವಿಧವೆ ತಾಯಿ ಮರುಮದುವೆ ಮಾಡಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಯುವರಾಜ್ ಶೆಲೆ ಎಂಬಾತ 5 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡಿದ್ದ. ಈತನ ತಾಯಿ ಪತಿ ಸಾವಿನಿಂದ ನೊಂದುಕೊಂಡಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. 45 ವಯಸ್ಸಿನ ತಾಯಿಗೆ ಸಂಗಾತಿಯ ಅಗತ್ಯವನ್ನು ಅರಿತ ಯುವರಾಜ್, ವರನನ್ನು ಹುಡುಕಿ ತಾನೇ ಮುಂದೆ ನಿಂತು ಮರುಮದುವೆ ಮಾಡಿಸಿದ್ದಾರೆ.
ನಾನು ಕೇವಲ 18 ವರ್ಷದವನಾಗಿದ್ದಾಗ ನನ್ನ ತಂದೆಯನ್ನು ಕಳೆದುಕೊಂಡೆ. ತಂದೆಯ ಸಾವು ನನಗೆ ಮತ್ತು ತಾಯಿಗೆ ದೊಡ್ಡ ಆಘಾತ ನೀಡಿತು. ನನ್ನ ತಾಯಿ ಒಂಟಿತನ ಎದುರಿಸಬೇಕಾಯಿತು. ಆಕೆ ಮಾನಸಿಕವಾಗಿ ತುಂಬಾ ಕುಗ್ಗಿದ್ದರು.
ನನ್ನ ತಾಯಿ ನನ್ನ ತಂದೆಯೊಂದಿಗೆ ಮದುವೆಯಾಗಿ ಸುಮಾರು 25 ವರ್ಷಗಳಾಗಿವೆ. ಒಬ್ಬ ಗಂಡಸು ತನ್ನ ಹೆಂಡತಿಯನ್ನು ಕಳೆದುಕೊಂಡರೆ, ಅವನು ಮರುಮದುವೆಯಾಗುವುದು ಸಹಜ ಎಂದು ಸಮಾಜ ಭಾವಿಸುತ್ತದೆ. ಅದೇ ನಂಬಿಕೆಯು ಮಹಿಳೆಗೆ ಏಕೆ ಅನ್ವಯಿಸುವುದಿಲ್ಲ ಎಂಬುದು ನನ್ನ ಪ್ರಶ್ನೆಯಾಗಿತ್ತು. ನಾನು ತಾಯಿಯನ್ನು ಮರುಮದುವೆಯಾಗುವಂತೆ ಮನವೊಲಿಸಿದೆ ಎಂದು ಯುವರಾಜ್ ಹೇಳಿಕೊಂಡಿದ್ದಾರೆ.
ಕೆಲವು ಸ್ನೇಹಿತರು ಮತ್ತು ಸಂಬಂಧಿಕರ ಸಹಾಯದಿಂದ ಯುವರಾಜ್ ತನ್ನ ತಾಯಿಗಾಗಿ ವರನನ್ನು ಹುಡುಕುವ ಕಾರ್ಯ ಮಾಡಿದ್ದ. ತನಗೆ ಪರಿಚಯವಿದ್ದ ಒಂಟಿಯಾಗಿ ಜೀವನ ನಡೆಸುತ್ತಿದ್ದ ಮಾರುತಿ ಘನವತ್ ಎಂಬಾತನೊಂದಿಗೆ ತನ್ನ ತಾಯಿಯನ್ನು ಮದುವೆಯಾಗುವ ಬಗ್ಗೆ ಪ್ರಸ್ತಾಪಿಸಿದರು. ಅವರು ಸಹ ಮದುವೆಗೆ ಒಪ್ಪಿಕೊಂಡರು. ಬಳಿಕ ಯುವರಾಜ್ ತಾಯಿ ಮತ್ತು ಮಾರುತಿ ಘನವತ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.//////