ಬೆಂಗಳೂರಲ್ಲಿ ಓಡಾಡಿದ ಹಳೆಯ ಗುಜರಿ ಬಿಎಂಟಿಸಿ ಬಸ್‌ಗಳನ್ನೇ ಬೆಳಗಾವಿಗೆ ಕೊಟ್ಟ ಸಾರಿಗೆ ಇಲಾಖೆ

ಬೆಳಗಾವಿ: ಬೆಂಗಳೂರಿಗೆ ಬೆಣ್ಣೆ, ಬೆಳಗಾವಿಗೆಸುಣ್ಣ ಎಂಬ ನಡೆಯನ್ನು ಈಗಿನ ರಾಜ್ಯ ಸರ್ಕಾರ ಮಾಡುತ್ತಿದೆ. ಬೆಂಗಳೂರಲ್ಲಿ ಓಡಾಡಿದ ಬಿಎಂಟಿಸಿ ಹಳೆಯ ಬಸ್‌ಗಳನ್ನೇ ಹುಬ್ಬಳ್ಳಿ, ಬೆಳಗಾವಿಗೆ ರವಾನಿಸಿದ್ದು ಎನ್‌ಡಬ್ಲ್ಯುಕೆಆರ್‌ಟಿಸಿ ಹುಬ್ಬಳ್ಳಿ, ಬೆಳಗಾವಿ ವಿಭಾಗಕ್ಕೆ ತಲಾ 50 ಹಳೆಯ ಬಿಎಂಟಿಸಿ ಬಸ್‌ಗಳನ್ನು ಸಾರಿಗೆ ಇಲಾಖೆ ನೀಡಿದೆ.
ಬಿಎಂಟಿಸಿಗೆ ಕೋಟ್ಯಂತರ ರೂ. ಖರ್ಚು ಮಾಡಿ ಹೊಸ ಬಸ್ ಖರೀದಿ ಮಾಡಲಾಗಿದೆ. ಆದರೆ ಬಿಎಂಟಿಸಿಯ ಗುಜರಿ ಬಸ್‌ಗಳನ್ನು ಬೆಳಗಾವಿ, ಹುಬ್ಬಳ್ಳಿ ನಗರದಲ್ಲಿ ಓಡಾಟಕ್ಕೆ ಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
5-6 ಲಕ್ಷ ಕಿ.ಮೀ ರನ್ನಿಂಗ್ ಆಗಿರುವ ಬಸ್ ಬೆಳಗಾವಿ, ಹುಬ್ಬಳಿಗೆ ರವಾನಿಸಲಾಗಿದ್ದು, ಅದರಲ್ಲಿ ಬೆಳಗಾವಿ ವಿಭಾಗವೊಂದರಲ್ಲೇ 10 ಲಕ್ಷ ಕಿ.ಮೀಗೂ ಹೆಚ್ಚು ಓಡಿದ 300 ಬಸ್‌ಗಳಿವೆ. ಇಷ್ಟೆಲ್ಲಾ ಹಳೆಯ ಬಸ್‌ಗಳಿದ್ದರೂ ಬದಲಾವಣೆಗೆ ಸಾರಿಗೆ ಇಲಾಖೆ ಮುಂದಾಗಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬೆಳಗಾವಿ ಡಿಪೋ ನಂಬರ್ 2ಕ್ಕೆ 50 ಹಳೆಯ ಬಿಎಂಟಿಸಿ ಬಸ್‌ಗಳನ್ನು ಸಾರಿಗೆ ಇಲಾಖೆ ನೀಡಿದ್ದು, ಸದ್ಯ ಬಸ್‌ಗಳು ನಗರದಿಂದ ತಾಲೂಕು ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿವೆ. ಆದರೆ ಇತ್ತೀಚೆಗಷ್ಟೇ ಚಲಿಸುತ್ತಿದ್ದ ಬಸ್ ಒಂದರ ಫುಟ್‌ರೆಸ್ಟ್ ಮುರಿದಿದೆ. ಬೆಳಗಾವಿ ನಗರದಿಂದ ರಾಮತೀರ್ಥ ನಗರ ಮಧ್ಯೆ ಸಂಚರಿಸುತ್ತಿದ್ದ ಬಸ್‌ನ ಫುಟ್‌ರೆಸ್ಟ್ ತುಂಡಾಗಿತ್ತು. ಫುಟ್‌ರೆಸ್ಟ್ ತುಂಡಾಗಿರುವ ಬಸ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅದೃಷ್ಟವಶಾತ್ ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಸಾರಿಗೆ ಇಲಾಖೆ ನೀಡಿರುವ ಬಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಸಂಚಾರ ಮಾಡುತ್ತಾರೆ. ಬಸ್‌ಗಳಲ್ಲಿ ಏನಾದರೂ ಅನಾಹುತ ಆದರೆ ಯಾರು ಹೊಣೆ? ಹೀಗಾಗಿ ಅಪಘಾತ ಸಂಭವಿಸುವ ಮುನ್ನ ಸಾರಿಗೆ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.///////