ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜನವರಿ 29 ಮತ್ತು 30ರಂದು :ರಾಜ್ಯ ಉಸ್ತುವಾರಿ ಎನ್.ರವಿಕುಮಾರ್

ಬೆಳಗಾವಿ: ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜನವರಿ 29 ಮತ್ತು 30ರಂದು ನಗರದ ಪ್ರೆಸಿಡೆನ್ಸಿ ಹೋಟೆಲ್ ನಲ್ಲಿ ನಡೆಯಲಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ರೈತ ಮೋರ್ಚಾ ರಾಜ್ಯ ಉಸ್ತುವಾರಿ ಎನ್.ರವಿಕುಮಾರ್ ತಿಳಿಸಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಿಎಂ ಮತ್ತು ಹಿರಿಯರಾದ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಭಾಗವಹಿಸಲಿದ್ದಾರೆ. ಬಳಿಕ ರೈತರಿಗೆ ಸಂಬಂಧಿಸಿದ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದರು.
ಮೋರ್ಚಾಗಳ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ವರ್ಷಕ್ಕೆ 2 ಬಾರಿ ನಡೆಸಲಾಗುತ್ತದೆ. ಈ ಬಾರಿ ವಾಣಿಜ್ಯ, ಶೈಕ್ಷಣಿಕ, ರೈತರ ಶಕ್ತಿಕೇಂದ್ರ ಬೆಳಗಾವಿಯಲ್ಲಿ ಸಂಘಟಿಸಲಾಗಿದೆ ಎಂದು ತಿಳಿಸಿದರು.
ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಹಸಿರು ನಿಶಾನೆ ತೋರಿಸಿ ದಿಟ್ಟತನ ಮೆರೆದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ವೇಳೆ ಅಭಿನಂದಿಸಲಾಗುವುದು. ಇದಲ್ಲದೆ ಅನೇಕ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದರು.
‘ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಗಂಗೋತ್ರಿ’ ಎಂಬುದು ಜನರಿಗೆ ತಿಳಿದಿದೆ. ಈ ಬಾರಿಯ ಚುನಾವಣೆಯಲ್ಲಿ ಭ್ರಷ್ಟಾಚಾರದಿಂದಲೇ ಕಾಂಗ್ರೆಸ್ ಪಕ್ಷ ಅಂತ್ಯ ಕಾಣಲಿದೆ ಎಂದು ರವಿಕುಮಾರ್ ಹೇಳಿದರು.
ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಶಿ ಮೌಳಿ ಕುಲಕರ್ಣಿ, ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡಿ, ಜಿಲ್ಲಾ ಅಧ್ಯಕ್ಷ ಶ್ರೀಕರ ಕುಲಕರ್ಣಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.