ಬಿಜೆಪಿಗೆ ಭಯ ಹುಟ್ಟಿದ್ದು, ರಾಜ್ಯಕ್ಕೆ ಮೋದಿ-ಶಾರನ್ನು ಕರೆಸುತ್ತಿದ್ದಾರೆ ಎಂದ ಸಿದ್ದರಾಮಯ್ಯ

ಕಲಬುರಗಿ: ಬಿಜೆಪಿಗೆ ಭಯ ಶುರುವಾಗಿದ್ದು, ಅದಕ್ಕಾಗಿಯೇ ಮೇಲಿಂದ ಮೇಲೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾರನ್ನು ರಾಜ್ಯಕ್ಕೆ ಕರೆಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಶನಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯಲ್ಲಿ ಜನರು ಸ್ವಯಂಪ್ರೇರಿತವಾಗಿ ಭಾಗಿಯಾಗುತ್ತಿದ್ದಾರೆ. ಹೋದ ಕಡೆಗಳಲ್ಲಿ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಾವೆಲ್ಲರೂ ಜಂಟಿಯಾಗಿ ಪಕ್ಷದ ಪ್ರಜಾಧ್ವನಿ ಯಾತ್ರೆ ನಡೆಸಿಕೊಂಡು ಹೋಗುತ್ತಿದ್ದೇವೆ. ಮೈಸೂರು ಭಾಗದಲ್ಲಿ ಫೆ.3ರಂದು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯಲಿದೆ ಎಂದರು.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಂಡರೆ ಕಾಂಗ್ರೆಸ್‌ಗೆ ಭಯ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಭಯ ಶುರುವಾಗಿದೆ. ಹೀಗಾಗಿ ಪದೇ ಪದೇ ಮೋದಿ, ಶಾ ಅವರನ್ನು ಹಾಗೇ ನಡ್ಡಾರನ್ನು ಕರೆಸುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಭಾಗ್ಯಗಳು ಒಂದು ಚಡ್ಡಿ ಕೊಂಡುಕೊಂಡರೆ ಇನ್ನೊಂದು ಚಡ್ಡಿ ಉಚಿತ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಾಫ್ಟ್ ಆಗಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲು ಆಗುವುದಿಲ್ಲ. ಕುಮಾರಸ್ವಾಮಿ ಬರೀ ಇಂತಹ ಸುಳ್ಳುಗಳನ್ನು ಹೇಳುತ್ತಾರೆ ಎಂದರು. ///////