Belagavi News In Kannada | News Belgaum

ತಂತ್ರಜ್ಞಾನದಲ್ಲಿ ಭಾರತ ನಂ.1 ಸ್ಥಾನ ತಲುಪಲು ಸಂಕಲ್ಪ : ಕೇಂದ್ರ ಗೃಹ ಸಚಿವ ಅಮಿತ್ ಶಾ

ಹುಬ್ಬಳ್ಳಿ : ತಂತ್ರಜ್ಞಾನದಲ್ಲಿ ಭಾರತ ನಂ.1 ಆಗಬೇಕು. ಟೆಕ್ನಾಲಜಿಯಲ್ಲಿ ಭಾರತ ಪ್ರಥಮ ಸ್ಥಾನ ತಲುಪುವುದು ವಿದ್ಯಾರ್ಥಿಗಳ ಕೈಯಲ್ಲಿದೆ. ಇದಕ್ಕಾಗಿ ಸಂಕಲ್ಪ ಮಾಡೋಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಬೊಮ್ಮಾಯಿಗೆ ಜನ್ಮದಿನದ ಶುಭಾಶಯ ತಿಳಿಸಿದರು. ಬಿವಿಬಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ ಕೆಎಲ್ ಇ ಬಹಳ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿದೆ. ಕೆಎಲ್ ಇ ಸಂಸ್ಥೆಯನ್ನ ನಿಸ್ವಾರ್ಥತೆಯಿಂದ ಸ್ಥಾಪಿಸಲಾಗಿದೆ. ಕೆಎಲ್ ಇಯಲ್ಲಿ ಓದುತ್ತಿರುವುದಕ್ಕೆ ಹೆಮ್ಮೆ ಇರಬೇಕು. ಐವರು ಶಿಕ್ಷಕರಿಂದ ಸ್ಥಾಪಿತವಾದ ಸಂಸ್ಥೆ ಇದು. ಶಿಕ್ಷಣ ವ್ಯವಸ್ಥೆ ಇಂದು ವ್ಯಾಪಾರೀಕರಣವಾಗಿದೆ ಇಂತಹ ಪರಿಸ್ಥಿತಿಯಲ್ಲೂ ಸಂಸ್ಥೆ ಬಡವರಿಗೆ ಶಿಕ್ಷಣ ನೀಡುತ್ತಿದೆ. 25 ಕೋಟಿ ವೆಚ್ಚದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು.
ವಿಶ್ವದೆದುರು ಭಾರತವನ್ನ ನಾಯಕ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಇಡೀ ವಿಶ್ವಕ್ಕೆ ಭಾರತದ ಶಕ್ತಿ ತೋರಿಸಬೇಕಿದೆ. ಮಹಾನ್ ಭಾರತದ ಕನಸನ್ನ ಯುವಜನತೆ ನನಸು ಮಾಡಬೇಕು. ಟೆಕ್ನಾಲಜಿಯಲ್ಲಿ ಭಾರತವನ್ನ ನಂ1 ಆಗಬೇಕು. ಅದನ್ನ ಮಾಡುವುದು ವಿದ್ಯಾರ್ಥಿಗಳ ಕೈಯಲ್ಲಿದೆ. ಸ್ವಾತಂತ್ರ ಹೋರಾಟಗಾರರ ಕನಸು ನನಸು ಮಾಡಬೇಕಿದೆ. 2014ರಲ್ಲಿ ಮಹತ್ವದ ಪರಿವರ್ತನೆಯಾಯಿತು. ಕೇವಲ 8 ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿಯಾಗಿದೆ ಎಂದು ಅಮಿತ್ ಶಾ ನುಡಿದರು.

ಶ್ರೀ ಬ್ರಹ್ಮರ್ಷಿ ಗುರುದೇವ್ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ 75 ವರ್ಷದ ಸುಧೀರ್ಘ ಪಯಣದ ಸಂಭ್ರಮವನ್ನು ಆಚರಿಸಲಾಯಿತು. ಬರುವ ದಿನಗಳಲ್ಲಿ ಡಾ ಪ್ರಭಾಕರ್ ಕೋರೆಯವರ ನೇತೃತ್ವದ ಈ ಸಂಸ್ಥೆ ಇನ್ನೂ ಹೆಚ್ಚಿನ ಪ್ರಗತಿಯನ್ನು ಕಾಣಲಿ, ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪವಾಗಲಿ ಹಾಗೂ ರಾಜ್ಯ ಮತ್ತು ದೇಶದ ಹೆಸರನ್ನು ಇದೇ ರೀತಿ ಬೆಳಗಿಸುತ್ತಿರಲಿ ಎಂದು ಇದೇ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಶುಭ ಹಾರೈಸಿದರು‌.

ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರ ಜೊತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಜಗದೀಶ್ ಶೆಟ್ಟರ್, ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಕೆ ಎಲ್ ಇ ಸಂಸ್ಥೆಯ ಅಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ, ಹಾಗೂ ಕೆಎಲ್ಇ ತಂತ್ರಜ್ಞಾನ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಅಶೋಕ್ ಶೆಟ್ಟರ್ ಉಪಸ್ಥಿತರಿದ್ದರು./////