ದೇಶದ ಮೊದಲ ಪತ್ರಿಕೆ, ಮೊದಲ ಪತ್ರಕರ್ತ

ದೇಶದ ಮೊದಲ ಪತ್ರಿಕೆ, ಮೊದಲ ಪತ್ರಕರ್ತ
ಎ. ಎಸ್. ಬಾಲಸುಬ್ರಹ್ಮಣ್ಯ
ದೇಶದ ಮೊದಲ ಪತ್ರಿಕೆ ೧೭೮೦ ಜನೆವರಿ ೨೯, ಶನಿವಾರದಂದು ಕಲ್ಕತ್ತೆಯಲ್ಲಿ ಹೊರಬಂತು. ಈ ಪತ್ರಿಕೆ ಪ್ರಕಟಿಸಿ ಇಂದಿಗೆ ೨೪೩ ವರ್ಷಗಳು ಕಳೆದಿವೆ. ಐರ್ಲೆಂಡ್ ಮೂಲದ ಜೇಮ್ಸ್ ಅಗಸ್ಟಸ್ ಹಿಕ್ಕಿ (೧೭೩೯ /೧೭೪೦-೧೮೦೨). ಈ ಸಾಪ್ತಾಹಿಕ ಪ್ರಕಟಣೆಗೆ ‘ಬೆಂಗಾಲ್ ಗೆಜೆಟ್ ಆರ್ ಕಲ್ಕತ್ತಾ ಜನರಲ್ ಅಡ್ವರ್ಟೈಸರ್’ ಎಂದು ಹೆಸರಿಸಿ ಒಂದು ರೂ ಬೆಲೆ ನಿಗದಿಪಡಿಸಿದ್ದ. ನಾಲ್ಕು ಪುಟಗಳ ಮೂರು ಕಾಲಂ ಹೊಂದಿದ್ದ ಈ ಪತ್ರಿಕೆ (೧೨ x ೮ ಇಂಚು) ಕಲ್ಕತ್ತೆಯ ನಾಗರಿಕರ ಸ್ಥಾನಮಾನವನ್ನು ಮೇಲ್ದರ್ಜೆಗೆ ಏರಿಸಿತ್ತು. ಏಕೆಂದರೆ ಇಂಗ್ಲೆಂಡಿನಲ್ಲಿ ಜನರು ಪತ್ರಿಕೆ ಓದುವಂತೆ ನಾವು ಕೂಡ ಒಂದು ಸ್ಥಳೀಯ ಪತ್ರಿಕೆ ಹೊಂದಿದ್ದೇವೆ ಎಂಬ ಹೆಮ್ಮೆ ಅವರಿಗೆ ಬಂದಿತ್ತು. ಈಸ್ಟ್ ಇಂಡಿಯಾ ಕಂಪನಿಯ ಕೇಂದ್ರಸ್ಥಳ ಕಲ್ಕತ್ತ ವಿದೇಶಿ ವ್ಯಾಪಾರ ವಹಿವಾಟುಗಳಿಂದ ಬಿಡುವಿಲ್ಲದ ನಗರವಾಗಿತ್ತು.
ಮುದ್ರಣ ಕಲೆ ದೇಶದ ಎಲ್ಲೆಡೆ ಪರಿಚಯವಾಗಿದ್ದರೂ, ಪತ್ರಿಕೆ ಸ್ಥಾಪಿಸಲು ಯಾರೂ ಮುಂದಾಗಿರಲಿಲ್ಲ. ಅಂತಹ ಸಾಹಸ ಮಾಡಿದ ವ್ಯಕ್ತಿ ಹಿಕ್ಕಿ. ಪತ್ರಿಕೆ ಪ್ರಕಟಿಸಿದ್ದು ಕೇವಲ ಎರಡೇ ವರ್ಷ. ಆ ಎರಡು ವರ್ಷಗಳಲ್ಲಿ ಆತ ಈಸ್ಟ್ ಇಂಡಿಯಾ ಕಂಪನಿಯ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ, ನಿರಂಕುಶ ಸರ್ಕಾರದ ದಬ್ಬಾಳಿಕೆಗೆ ಸವಾಲು ಹಾಕಿದ, ಚರ್ಚ್ ಹಣದ ದುರುಪಯೋಗಗಳನ್ನು ಬಯಲು ಮಾಡಿದ. ಕಂಪನಿಯ ವಿರುದ್ಧ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದಿಟ್ಟ ಕಲಿ ಹಿಕ್ಕಿ. ಆ ದಿನಗಳಲ್ಲಿಯೇ ರಾಜ್ಯದ ಎರಡು ಬಲಿಷ್ಠ ಸಂಸ್ಥೆಗಳಾದ ಚರ್ಚ್ ಮತ್ತು ಸರ್ಕಾರಗಳನ್ನು ವಿರೋಧಿಸಿದ. ಪತ್ರಿಕೆಯ ಶಕ್ತಿ ಜನರನ್ನು ಹೇಗೆ ರಕ್ಷಿಸಬಲ್ಲದು ಎಂಬುದನ್ನು ಭಾರತದ ನೆಲದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿದ ಹೀರೋ ಈತ.
ಆತನ ಹೋರಾಟ ವಿರೋಧಿಸಿದ ಹಲವು ಬ್ರಿಟಿಷ್ ಸಾಮ್ರಾಜ್ಯಶಾಹಿ ಯುಗದ ವಿದ್ವಾಂಸರು ಆತನ ಬಗ್ಗೆ ತಪ್ಪು ಚಿತ್ರಣ ನೀಡಿ ಆತ ಓರ್ವ ದುಷ್ಕರ್ಮಿ, ಕೀಳುಮಟ್ಟದ ವ್ಯಕ್ತಿ ಎಂದು ಇತಿಹಾಸದಲ್ಲಿ ದಾಖಲಿಸಿದ್ದರು. ಇತ್ತೀಚಿಗೆ ಮಾತ್ರ ಆತನ ನಿಜ ಸಾಹಸ ಇತಿಹಾಸದಲ್ಲಿ ದಾಖಲಾಗಿದೆ. ಅಂದಿನ ದಿನಮಾನದ ಎಲ್ಲ ಬೆಳವಣಿಗೆಗಳನ್ನು ತನ್ನ ಪತ್ರಿಕೆಯಲ್ಲಿ ಬರೆಯಲು ಆತ ನಿಶ್ಚಯಿಸಿದ್ದ. ರಾಜಕೀಯ ಬೆಳವಣಿಗೆಗಳು, ಜಾಗತಿಕ ಸುದ್ದಿಗಳ ಪ್ರಕಟಣೆಯ ಜತೆಗೆ ತನ್ನ ಓದುಗರಿಗೆ ಪತ್ರಗಳು ಮತ್ತು ಪದ್ಯಗಳನ್ನು ಬರೆಯಲು ವಿನಂತಿಸಿದ. ಈತನ ಬರವಣಿಗೆಯ ವಿಶೇಷತೆ ಎಂದರೆ ಹಾಸ್ಯ ಮತ್ತು ವಿಡಂಬನೆ. ನಗರದ ಎಲ್ಲ ಮುಖ್ಯ ಅಧಿಕಾರಿಗಳಿಗೆ ಈತ ಅಡ್ಡಹೆಸರು ಇರಿಸಿ ವಿಡಂಬನೆ ಮಾಡುತ್ತಿದ್ದ. ಇದು ಕಲ್ಕತ್ತೆಯ ನಾಗರಿಕರಿಗೆ ಮನರಂಜನೆ ನೀಡಿತು. ತವರಿನಲ್ಲಿರುವವರಿಗೆ ಪತ್ರ ಬರೆಯುವಾಗ ಅನೇಕರು ಇಲ್ಲಿನ ರಾಜಕೀಯ ಏಳುಬೀಳುಗಳನ್ನು ವಿಸ್ತರಿಸಿ ಬರೆಯುವ ಬದಲು, ಹಿಕ್ಕಿ ಪತ್ರಿಕೆಯ ಪ್ರತಿಗಳನ್ನು ಪತ್ರದ ಜತೆ ಕಳುಹಿಸಿ ನಿರುಮ್ಮಳಾಗಿರುತ್ತಿದ್ದರು.
ಅನೇಕ ವರ್ಗದವರ ಆಶೋತ್ತರಗಳನ್ನು ಪ್ರತಿಬಿಂಬಿಸಿ, ಕಲ್ಕತ್ತೆ ನಗರದ ಏಳಿಗೆಗೆ ಶ್ರಮಿಸಿದ. “ಈ ಸಾಪ್ತಾಹಿಕವು ರಾಜಕೀಯ ಮತ್ತು ವಾಣಿಜ್ಯ ಪತ್ರಿಕೆ; ಎಲ್ಲಾ ಪಕ್ಷಗಳಿಗೆ ಮುಕ್ತವಾಗಿದೆ ಆದರೆ ಯಾರಿಂದಲೂ ಪ್ರಭಾವಿತವಾಗಿಲ್ಲ” ಎಂದು ಮೊದಲೇ ಘೋಷಿಸಿದ್ದ. ಹಿಕ್ಕಿ ಪಕ್ಷಪಾತ ಸುದ್ದಿಗಳನ್ನು ತಡೆಹಿಡಿದು, ಪಕ್ಷಾತೀತವಾಗಿ ಇರಲು ಪ್ರಯತ್ನಿಸಿದ. ರಾಜಕೀಯ ವಿವಾದಗಳಿಂದ ಆದಷ್ಟೂ ದೂರ ಇರಲು ಪ್ರಯತ್ನಿಸಿದ. ಹಿಕ್ಕಿಯ ಮೊದಲ ಆದ್ಯತೆ ನಗರ ಸುಧಾರಣೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿತ್ತು. ೯೦ ವರ್ಷಗಳ ಇತಿಹಾಸವಿದ್ದ ಕಲ್ಕತ್ತೆ ನಗರದಲ್ಲಿ ಉತ್ತಮ ರಸ್ತೆಗಳಿರಲಿಲ್ಲ, ಸ್ವಚ್ಛತೆ ಅಭಾವ, ಸ್ಮಶಾನಗಳ ನಿರ್ವಹಣೆ ಸರಿ ಇರದೇ ಮಳೆಗಾಲದಲ್ಲಿ ಶವಗಳು ಹೊರಗೆ ಕಾಣಿಸುತ್ತಿದ್ದವು. ಗುಡಿಸಲುವಾಸಿಗಳಿಂದ ನಗರ ತುಂಬಿತ್ತು. ಇವುಗಳಲ್ಲೆರ ಉತ್ತಮಿಕೆಯ ಅವಶ್ಯಕತೆ ಜತೆಗೆ ಸಮಾಜದ ಎಲ್ಲ ವರ್ಗದವರ ಧ್ವನಿಯಾಗಿಸಲು ಪತ್ರಿಕೆ ಮೂಲಕ ಹಿಕ್ಕಿ ಶ್ರಮಿಸಿದ. ಅನೇಕಸಲ ಪ್ರಾಣಿ ಮತ್ತು ಮನುಷ್ಯರ ಶವಗಳು ದಾರಿಯಲ್ಲೇ ಕೊಳೆಯುತ್ತಿದುದನ್ನು ಕಂಡು ಪತ್ರಿಕೆ ಸರಕಾರದ ಗಮನ ಸೆಳೆಯುತ್ತಿತ್ತು. ಯೂರೋಪಿನ ನಗರಗಳಲ್ಲಿ ಇರುವ ನಾಗರಿಕ ಸೌಲಭ್ಯಗಳು ಇಲ್ಲಿಯವರಿಗೂ ದೊರೆಯಬೇಕೆನ್ನುವುದು ಅವನ ಒತ್ತಾಸೆಯಾಗಿತ್ತು.
ಹಲವಾರು ದೇಶಗಳ ವ್ಯಾಪಾರಿಗಳು ಕಲ್ಕತ್ತೆಯಲ್ಲಿ ಬೀಡುಬಿಟ್ಟು ಅದೊಂದು ಬಹುಭಾಷೆಗಳ ಮತ್ತು ಬಹುಸಂಸ್ಕೃತಿಯ ಕೇಂದ್ರವೂ ಆಗಿತ್ತು. ಅಧಿಕ ಸಂಖ್ಯೆಯ ಹಿಂದೂ-ಮುಸಲ್ಮಾನರು ಈ ನಗರದಲ್ಲಿದ್ದರು. ಆ ವೇಳೆಗಾಗಲೇ ಹಲವು ಯುರೋಪಿಯನ್ನರು ಸ್ಥಳೀಯರನ್ನು ವಿವಾಹವಾಗಿ ಆಂಗ್ಲೋ-ಇಂಡಿಯನ್ ಸಂಸ್ಕೃತಿ ಉದಯವಾಗಿತ್ತು. ಪತ್ರಿಕೆಯ ಮೂಲಕ ಮುಕ್ತ ಚರ್ಚೆಯೂ ನಡೆಯುತಿತ್ತು. ಮಹಿಳೆಯರು ಏಕೆ ಮುಷ್ಟಿಮೈಥುನ ಮಾಡಿಕೊಂಡು ತಮ್ಮ ಲೈಂಗಿಕ ಆಸೆ ಪೂರೈಸಿಕೊಳ್ಳಬಾರದು ಎನ್ನುವಮಟ್ಟಿಗೆ ಪತ್ರಿಕೆಯಲ್ಲಿ ಚರ್ಚೆ ನಡೆಯಿತು. ಅನೇಕ ಮಹಿಳೆಯರು ಬರವಣಿಗೆಯಲ್ಲಿ ಸಕ್ರಿಯವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಸಮುದ್ರ ವ್ಯಾಪಾರದಲ್ಲಿ ಹಣ ಮಾಡುವ ಆಸೆಯಲ್ಲಿ, ಎಂಟು-ಹತ್ತು ತಿಂಗಳು ಪ್ರಯಾಣ ಮಾಡಿ ಬಂದಿದ್ದ ಯುರೋಪಿಯನ್ನರು ಇಲ್ಲಿನ ಒಣ ಹವೆ, ಬಿರುಸಿನ ಮಳೆಗಾಲ, ಆರೋಗ್ಯ ಸೌಲಭ್ಯಗಳ ಅಲಭ್ಯತೆಯಿಂದ ಹೈರಾಣಾಗಿದ್ದರು. ಹಿಕ್ಕಿ ತನ್ನ ಪತ್ರಿಕೆಯಲ್ಲಿ ಯುರೋಪಿಯನ್ನರು ಮತ್ತು ಸ್ಥಳೀಯರ ಬಗ್ಗೆ ಸಹ ಸುದ್ದಿಗಳನ್ನು ಪ್ರಕಟಿಸಿದ. ಬೆಂಕಿ ಅಪಘಾತದಲ್ಲಿ ಸಿಲುಕಿದ ಮಹಿಳೆ ಹೇಗೆ ಮಗುವಿಗೆ ಜನ್ಮ ನೀಡಿ ಬದುಕಿದಳು, ತಾಳೆ ಮರದಿಂದ ನೀರಾ ಸಂಗ್ರಹಿಸಲು ಹೋಗಿ ಮಹಿಳೆಯೊಬ್ಬಳು ಹೇಗೆ ಮರದಿಂದ ಬಿದ್ದು ಸತ್ತಳು, ಬ್ರಿಟಿಷ್ ಹಡಗು ಮಾಲೀಕರು ಭಾರತೀಯರನ್ನು ಒತ್ತೆಯಾಳಾಗಿ ಹಿಡಿದು ತಮ್ಮ ಸೇವೆಗೆ ಹೇಗೆ ಕರೆದೊಯ್ಯುತ್ತಿದ್ದರು, ಹೂಗ್ಲಿ ನದಿಯಲ್ಲಿ ದೋಣಿಗಳು ಮುಳುಗಿ ಜನ ಹೇಗೆ ಸಾಯುತ್ತಾರೆ- ಇಂತಹ ಸುದ್ದಿಗಳನ್ನು ಪ್ರಕಟಿಸಿ ಓದುಗರ ಮನಸ್ಸನ್ನು ಗೆಲ್ಲುತ್ತಿದ್ದ.
೧೭೮೦ ರ ಮಾರ್ಚ್ ತಿಂಗಳಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕಲ್ಕತ್ತೆಯ ೧೫ ಸಾವಿರ ಗುಡಿಸಲುಗಳು ಸುಟ್ಟು ೧೯೦ ಜನ ಸತ್ತರು. ನೀರು, ಊಟ, ಬಟ್ಟೆ ಮತ್ತು ಆಶ್ರಯಗಳಿಲ್ಲದೆ ಸಾವಿರಾರು ನಿರ್ಗತಿಕರು ಪರದಾಡಿದರು. ಇವರಿಗೆ ನಗರದ ಜನತೆ ಸಹಾಯ ಮಾಡಬೇಕೆಂದು ಹಿಕ್ಕಿ ಪತ್ರಿಕೆಯ ಮೂಲಕ ಮನವಿ ಮಾಡಿದ. ತಕ್ಷಣವೇ ಕಂಪನಿ ಎಚ್ಚೆತ್ತು ಹಲಾವಾರು ಕ್ರಮಗಳನ್ನು ಕೈಗೊಂಡಿತು. ಈ ಬಗೆಯ ಕ್ರಮಗಳನ್ನು ಕಂಡು ಹಿಕ್ಕಿ ತನ್ನ ಪತ್ರಿಕೆಗೆ ಒಳ್ಳೆಯ ಪ್ರಭಾವವಿದೆ ಎಂದು ಭಾವಿಸಿದ. ಈ ದುರಂತ ಸಂಭಿವಿಸಿದ ನಂತರ ನಗರದಲ್ಲಿ ಗುಡಿಸಲುಗಳನ್ನು ನಿಷೇಧಿಸಲಾಯ್ತು. ನಾಗರಿಕರಿಗೆ ರಸ್ತೆ ತೆರಿಗೆ ವಿಧಿಸಿ, ಸುಧಾರಣೆಗಳು ಆರಂಭವಾದವು. ಹಿಕ್ಕಿ ತನ್ನ ಪತ್ರಿಕೆಯ ಪ್ರಭಾವ ಕಂಡು, ನಿಧಾನವಾಗಿ ರಾಜಕೀಯದತ್ತ ವಾಲಿದ. ಅನೇಕ ಕಂಪನಿ ಅಧಿಕಾರಿಗಳು ಮತ್ತು ಸಾಮಾನ್ಯ ಓದುಗರು ಇವನಿಗೆ ಬೆಂಬಲ ವ್ಯಕ್ತಪಡಿಸಿದರು. ಕಂಪನಿಯ ಗುತ್ತಿಗೆ ವ್ಯಾಪಾರಗಳಲ್ಲಿ ನಡೆಯುತ್ತಿದ್ದ ಅಕ್ರಮಗಳು ಹಾಗು ಲಂಚಗುಳಿತನದ ಬಗ್ಗೆ ಟೀಕೆ ಆರಂಭಿಸಿದ. ಸೈನ್ಯದಲ್ಲಿದ್ದ ಅನೇಕ ಸಮಸ್ಯೆಗಳನ್ನು ಪತ್ರಗಳ ಮೂಲಕ ಹೊರಗೆಡಹಿದ. ಎರಡು ಮೂರು ತಿಂಗಳು ತಡವಾಗಿ ಅವರಿಗೆ ವೇತನ ಬಟವಾಡೆಯಾಗುತ್ತಿತ್ತು. ಹಲವು ಯುದ್ಧಗಳಲ್ಲಿ ಜಯಿಸಿದ್ದಕ್ಕೆ ನೀಡಬೇಕಿದ್ದ ಬಹುಮಾನ ಮೊತ್ತವನ್ನು ಅಧಿಕಾರಿಗಳು ನೀಡದೆ ಸೈನಿಕರು ನಿರಾಶರಾಗಿದ್ದರು. ಮುಂಬಡ್ತಿ ದೊರೆತಿರಲಿಲ್ಲ.
೧೭೮೦ ರಲ್ಲಿ ತಮಿಳುನಾಡಿನ ಪೊಲಿಲೂರ್ ನಲ್ಲಿ ಬ್ರಿಟಿಷ್ ಮತ್ತು ಹೈದರಾಲಿ ನಡುವೆ ನಡೆದ ಯುದ್ಧ ಹಿಕ್ಕಿಯ ಮೇಲೆ ಅಪಾರ ಪ್ರಭಾವ ಬೀರಿತ್ತು. ಈ ಯುದ್ಧದಲ್ಲಿ ೩,೦೦೦ ಸಾವಿರ ಬ್ರಿಟಿಷ್ ಸೈನಿಕರು ಹತರಾದರು. ಇದೊಂದು ಕ್ರೂರ ಯುದ್ಧವಾಗಿತ್ತು. ಇದರ ವರದಿಗಳನ್ನು ಪ್ರಕಟಿಸಿದ ಹಿಕ್ಕಿ ದಂಗಾದ. ಬ್ರಿಟಿಷ್ ಸೈನಿಕರ ಸಾವನ್ನು ಖಂಡಿಸಿದ. ಈ ಯುದ್ಧವಾದರೂ ಏಕೆ ಎಂದು ಪ್ರಶ್ನಿಸಿದ. ಹಿಕ್ಕಿ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿದ ವರದಿಯನ್ನು ಇಂಗ್ಲೆಂಡ್, ಅಮೇರಿಕಾ ಮತ್ತು ಯೂರೋಪಿನ ಎಲ್ಲ ಪತ್ರಿಕೆಗಳು ಪ್ರಕಟಿಸಿದವು. ಈ ಯುದ್ಧದ ಪ್ರಭಾವದಿಂದ ಆತ ಕಂಪನಿಯ ಅಧಿಕಾರಿಗಳ ತೀರ್ಮಾನಗಳನ್ನು ಆಕ್ಷೇಪಿಸಲಾರಂಭಿಸಿದ.
ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್ ತೆಗೆದುಕೊಂಡ ಹಲವಾರು ತೀರ್ಮಾನಗಳನ್ನು ಕಂಪನಿಯ ಆಡಳಿತ ಮಂಡಳಿ ವಿರೋಧಿಸಿತ್ತು. ೧೭೮೦ ರ ಅಕ್ಟೋಬರ್ ನಲ್ಲಿ ಕಂಪನಿಯ ಪರವಾಗಿ ಇನ್ನೊಂದು ಪತ್ರಿಕೆ ‘ಇಂಡಿಯಾ ಗೆಜೆಟ್’ ಆರಂಭವಾಗಿ, ಅಂಚೆ ಕಚೇರಿಯಲ್ಲಿ ಉಚಿತವಾಗಿ ಹಂಚಿಕೆ ಮಾಡಲು ಸರ್ಕಾರದ ಅನುಮತಿ ಪಡೆಯಿತು. ಈ ಪತ್ರಿಕೆ ಮುದ್ರಿಸಲು ಹಳೆ ಮುದ್ರಣಯಂತ್ರವನ್ನು ಕಿರೆಂಡೆರ್ ಎಂಬ ಪಾದ್ರಿ ಒದಗಿಸಿದ್ದ. ಈ ಪತ್ರಿಕೆ ಹೊರಬರುತ್ತಿದ್ದಂತೆ ಹಿಕ್ಕಿ ಹತಾಶನಾದ ಮತ್ತು ಸರ್ಕಾರವನ್ನು ಕಟುಪದಗಳಿಂದ ಟೀಕಿಸಲಾರಂಭಿಸಿದ. ಹೇಸ್ಟಿಂಗ್ಸ್ ತನ್ನ ಕುರ್ಚಿ ಭದ್ರಪಡಿಸಲು ಹಲವಾರು ಅಕ್ರಮ ನೇಮಕಾತಿಗಳನ್ನು ಮಾಡಿದ್ದ ಮತ್ತು ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ತನ್ನ ನಿಯಂತ್ರದಲ್ಲಿ ಇರಿಸಿದ್ದ. ಈ ಎರಡು ಪತ್ರಿಕೆಗಳು ತದ್ವಿರುದ್ಧವಾಗಿ ಸುದ್ದಿ ಮತ್ತು ಟೀಕೆಟಿಪ್ಪಣಿಗಳನ್ನು ಪ್ರಕಟಿಸುತ್ತಿದ್ದವು. ಹಿಕ್ಕಿ ಜನಸಾಮಾನ್ಯರನ್ನು ಬೆಂಬಲಿಸಿದರೆ ವೈರಿ ಪತ್ರಿಕೆ ಶ್ರೀಮಂತರು ಮತ್ತು ಅಧಿಕಾರಿಗಳನ್ನು ಸಮರ್ಥಿಸುತ್ತಿತ್ತು..
ಕಂಪನಿಯ ರಫ್ತು ವ್ಯವಹಾರದಲ್ಲಿ ಅನೇಕ ದಲ್ಲಾಳಿಗಳು ಶಾಮೀಲಾಗಿದ್ದರು. ಅಪೀಮು, ಉಪ್ಪು, ರೇಷ್ಮೆ, ಅಡಿಕೆ, ಅಕ್ಕಿ ಜತೆಗೆ ಸೈನ್ಯಕ್ಕೆ ಬೇಕಾದ ಆನೆಗಳು, ದೋಣಿ ಮುಂತಾದವುಗಳ ಸರಬರಾಜಿನಲ್ಲಿ ಅಕ್ರಮ ವ್ಯವಹಾರಗಳು ಸರ್ವೇಸಾಮಾನ್ಯವಾಗಿದ್ದವು. ಹಿಕ್ಕಿ ಕೋಪಕ್ಕೆ ಮುಖ್ಯ ಕಾರಣ ಸೈನ್ಯಕ್ಕೆ ಬೇಕಾದ ಆಹಾರ ಮತ್ತು ಸಾಗಣೆಗೆ ಬೇಕಾದ ಎತ್ತುಗಳ ಸರಬರಾಜಿಗೆ ಅಧಿಕ ಹಣ ನೀಡಿ ಹೇಸ್ಟಿಂಗ್ಸ್ ತನ್ನ ಸ್ನೇಹಿತನಿಗೆ ಗುತ್ತಿಗೆ ನೀಡಿದ. ಬೇರೆ ಸರಬರಾಜುದಾರರಿಂದ ಅಂದಾಜು ಬೆಲೆ ತರಿಸದೆ, ವಾರ್ಷಿಕವಾಗಿ ನಾಲ್ಕರಿಂದ ಹತ್ತು ಲಕ್ಷಕ್ಕೆ ಹೆಚ್ಚಿಸಲಾಯಿತು. ಗುತ್ತಿಗೆ ಪಡೆದವರು ತಮ್ಮ ಕೆಲಸವನ್ನು ಇತರರಿಗೆ ಒಪ್ಪಿಸಿ ಅಪಾರ ಪ್ರಮಾಣದಲ್ಲಿ ಹಣ ಜೇಬಿಗೆ ಇಳಿಸುತ್ತಿದ್ದರು. ನದಿಗಳ ತಡೆಒಡ್ಡುಗಳ ನಿರ್ಮಾಣದ್ಲಲೂ ಇದೇ ರೀತಿ ಆಗಿತ್ತು.
ನಗರದ ರಸ್ತೆ ಸುಧಾರಣೆಗೆ ತರಲಾದ ಹೊಸ ನಿಯಮಾವಳಿಗಳು ಅಧಿಕಾರಿಗಳಿಗೆ ಮತ್ತಷ್ಟು ಹಣ ಕಬಳಿಸಲು ನೆರವಾಗುತ್ತವೆ ಎಂದು ಹಿಕ್ಕಿ ವಾದಿಸಿ, ಮೇಲಿನ ಅಧಿಕಾರಿಗಳು ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಈ ಜನ್ಮದಲ್ಲಿ ಶಿಕ್ಷೆ ಆಗದಿದ್ದರೂ ಮುಂದಿನ ಜನ್ಮದಲ್ಲಿ ಖಂಡಿತ ಎಂದು ಕಟು ಶಬ್ದಗಳಲ್ಲಿ ಬರೆದ. ಹಿಕ್ಕಿಯ ಇನ್ನೊಂದು ವಾದ; ನಾಗರಿಕರ ಸಮ್ಮತಿ ಇಲ್ಲದೆ ತೆರಿಗೆ ವಿಧಿಸಲು ಹೇಗೆ ಸಾಧ್ಯ. ಪ್ರಾತಿನಿಧ್ಯವಿಲ್ಲದೇ ತೆರಿಗೆ ವಿಧಿಸುವಂತಿಲ್ಲ ಎಂದು ವಾದಿಸಿದ. ಅಮೆರಿಕೆಯ ಸ್ವಾತಂತ್ರ್ಯ ಹೋರಾಟದ ಉದಾಹರಣೆ ನೀಡಿದ. ತಾನು ಜನರ ಹಕ್ಕುಗಳ ಹೋರಾಟಗಾರ ಎಂಬ ಚಿತ್ರಣ ನೀಡಿದ. ಕೆಲ ತಿಂಗಳ ಹಿಂದಷ್ಟೇ ಬ್ರಿಟಿಷರ ವಿರುದ್ಧ ಅಮೆರಿಕನ್ನರ ಹೋರಾಟವನ್ನು ಟೀಕಿಸಿದ್ದ ಹಿಕ್ಕಿ ಈಗ ತನ್ನ ವರಸೆ ಬದಲಿಸಿದ್ದ.
ಸೇನೆಯ ಹಲವಾರು ಅಧಿಕಾರಿಗಳು ಹಿಕ್ಕಿಯ ಗೆಳೆಯರಾಗಿದ್ದು, ಅಲ್ಲಿನ ಕೊರತೆಗಳ ಬಗ್ಗೆ ನಿರಂತರವಾಗಿ ಗುಪ್ತ ವರದಿ ಕಳುಹಿಸುತ್ತಿದ್ದರು. ಒಮ್ಮೆ ಈತನ ಮುದ್ರಣ ಕೆಲಸವನ್ನು ನಿರಾಕರಿಸಿದ್ದ ಪಿಯಾರ್ಸ್ ಎಂಬಾತನ ಮೇಲೆ ಹಿಕ್ಕಿ ಕಿಡಿ ಕಾರುತ್ತಿದ್ದ. ಕೆಲ ಅಧಿಕಾರಿಗಳ ಹಲವಾರು ಪತ್ರಗಳನ್ನು ಹಿಕ್ಕಿ ಪ್ರಕಟಿಸಿದ. ಸೇನೆ ಮುಖ್ಯಸ್ಥನಿಗಿಂತ ನಾವು ಹಿಕ್ಕಿಯ ಬಗ್ಗೆ ಹೆಚ್ಚು ಗೌರವ ಹೊಂದಿದ್ದೇವೆ ಎನ್ನುವ ಭಾವನೆ ಮೂಡಿಸಿದ. ಇಂಗ್ಲಿಷ್ ರಣಹದ್ದುಗಳು ಭಾರತೀಯರ ಮೇಲೆ ಆಕ್ರಮಣ ನಡೆಸುತ್ತಿವೆ ಎನ್ನುವ ಪತ್ರ ಪ್ರಕಟಿಸಿದ. ಬ್ರಿಟಿಷ್ ಸಾಮ್ರಾಜ್ಯ ವಿಸ್ತರಿಸುವ ಹೇಸ್ಟಿಂಗ್ಸ್ ಪ್ರಯತ್ನಗಳನ್ನು ಹಿಕ್ಕಿ ಬಲವಾಗಿ ವಿರೋಧಿಸಿದ. ನೂರಾರು ಸೈನಿಕ ಸಾವು ಯಾವ ನ್ಯಾಯ ಎನ್ನುತ್ತಿದ್ದ. ಈತನೊಬ್ಬ ಮೊಗಲ್ ಸಾಮ್ರಾಟನಾಗುವ ಉತ್ಕಟ ಆಕಾಂಕ್ಷೆ ಹೊಂದಿದ್ದಾನೆ, ಎಂದು ಜರಿದ. ಅಲ್ಲದೆ ಈತ ಕಾರಾನ್ ವಾಲಿಸ್ನ ‘ದುಷ್ಟ ಉತ್ತರಾಧಿಕಾರಿ’ ಎಂದ. ಅಲ್ಲದೆ ಈತ ನಪುಂಸಕನೆಂದು ಬರೆದ. ಹೆಸ್ಟಿಂಗ್ ನ ಮೇಲಿನ ಆರೋಪಗಳು ಬಹಳ ವೈಯುಕ್ತಿಕವಾಗಿದ್ದವು. ಇದರಿಂದ ಆಡಳಿತವರ್ಗದವರು ಹಿಕ್ಕಿ ಅತ್ಯಂತ ದುಷ್ಟ ಮತ್ತು ಕಂಪನಿಗೆ ಅಪಾಯಕಾರಿ ಎಂದು ತೀರ್ಮಾನಿಸಿದರು. ಇನ್ನೊಂದು ಘಟನೆಯಲ್ಲಿ ತನ್ನ ಎದುರಾಳಿ ಪತ್ರಿಕೆಗೆ ಮುದ್ರಣ ಸಲಕರಣೆಗಳನ್ನು ಸರಬರಾಜು ಮಾಡಿದ ಧರ್ಮಗುರು ಕಿರೆಂಡೆರ್ ಧಾರ್ಮಿಕ ಸಂಸ್ಥೆಗೆ ಭಾರಿ ವಂಚನೆ ಎಸಗಿದ್ದಾನೆ. ಧರ್ಮಪ್ರಚಾರಕ್ಕೆ ಬಳಸಬೇಕಾದ ಈ ಸಲಕರಣೆಗಳು ಬೇರೆಯವರ ಪಾಲಾಗಿವೆ. ಈತನ ದುಷ್ಕೃತ್ಯಗಳು, ಅಪ್ರಾಮಾಣಿಕತೆ, ಹಣ ದುರುಪಯೋಗಗಳಿಗೆ ಲೆಕ್ಕವಿಲ್ಲ ವೆಂದು ಆರೋಪಿಸಿದ. ಈತ ಧರ್ಮಸಂಸ್ಥೆಯ ಪಾವಿತ್ರವನ್ನೇ ಹಾಳು ಮಾಡಿದ್ದನೆಂದು ಬರೆದ. ಕಿರೆಂದಾರ್ ಕೂಡ ಹೇಸ್ಟಿಂಗ್ಸ್ ನ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ.
ಜೂನ್ ೧೨, ೧೭೮೧ ರಂದು ಹಿಕ್ಕಿ ವಿರುದ್ಧ ಹಲವು ಮೊಕದ್ದಮೆಗಳು ದಾಖಲಾಗಿ, ಕೋರ್ಟ್ ಮುಂದೆ ಹಾಜರಾಗಬೇಕಾಯಿತು. ಆತನ ಮೇಲೆ ಐದು ಆರೋಪಗಳನ್ನು ಹೊರಿಸಲಾಗಿತ್ತು ಮತ್ತು ವಿಚಾರಣೆಗೆ ೨೩ ನ್ಯಾಯಾಧೀಶರ ಪೀಠ ಸಿದ್ದವಾಗಿತ್ತು. ಇಲ್ಲಿ ಕುಳಿತಿರುವ ಹಲವರ ಮೇಲೆ ನನಗೆ ನಂಬಿಕೆಯಿಲ್ಲ ಎಂದು ಹಿಕ್ಕಿ ವಾದಿಸಿದ ಮೇಲೆ, ರಾಜಿ ನಡೆದು ನ್ಯಾಯಾಧೀಶರ ಸಂಖ್ಯೆಯನ್ನು ೧೨ ಕ್ಕೆ ಇಳಿಸಲಾಯಿತು. ಹೇಸ್ಟಿಂಗ್ಸ್ ಮೇಲಿನ ಮೂರು ಮತ್ತು ಕಿರೆಂಡೆರ್ ಮೇಲಿನ ಎರಡು ಆರೋಪಗಳು ನ್ಯಾಯಾಲಯದ ಮುಂದೆ ತೀರ್ಮಾನವಾಗಬೇಕಿತ್ತು. ಕ್ರಿಮಿನಲ್ ಮೊಕದ್ದಮೆಗಳಲ್ಲಿ ಜಾಮೀನು ಬೇಕಾದರೆ ೪೦ ಸಾವಿರ ರೂ ನೀಡುವಂತೆ ಕೋರ್ಟ್ ಆಜ್ಞಾಪಿಸಿತು. ಹಿಕ್ಕಿ ನಿರಾಕರಿಸಿದ, ಹಿಕ್ಕಿಯನ್ನು ಜೈಲಿಗೆ ಅಟ್ಟಲಾಯಿತು. ಆದರೆ ಪತ್ರಿಕೆ ನಿಲ್ಲಲಿಲ್ಲ. ದೌರ್ಜನ್ಯದ ಪರಮಾವಧಿ ಇದು ಎಂದು ಸರ್ಕಾರವನ್ನು ಹೀಗಳೆದ. ತನ್ನ ಎದುರಾಳಿಗಳಿಗೆ ಕೊಂಕು ಹೆಸರುಗಳನ್ನಿರಿಸಿ ಒಂದು ನಾಟಕವನ್ನೇ ರಚಿಸಿ ಪತ್ರಿಕೆಯಲ್ಲಿ ಪ್ರಕಟಿಸಿದ. ನನ್ನನ್ನು ವಿಚಾರಿಸುತ್ತಿರುವ ನ್ಯಾಯಾಧೀಶರಗಳು, ಕಪಟಿಗಳು, ಲಂಚಗುಳಿಕರು, ಗುತ್ತಿಗೆದಾರರು ಮತ್ತು ಎಲ್ಲರೂ ಹೇಸ್ಟಿಂಗ್ಸ್ ಪರವಾಗಿ ಇರುವವರು ಎಂದು ತನ್ನ ಓದುಗರಿಗೆ ತಿಳಿಸಿದ. ಸರ್ಕಾರದ ಮೇಲೆ . ಒಂದರಮೇಲೊಂದು ಆಪಾದನೆಗಳನ್ನು ಮಾಡಿದ. ಅದರಂತೆ ಸರ್ಕಾರ ಮೊಕದ್ದಮೆಗಳನ್ನು ದಾಖಲಿಸುತ್ತ ಮುನ್ನಡೆಯಿತು. ಮಾರ್ಚ್ ೧೭೮೨ ರಲ್ಲಿ ಹಿಕ್ಕಿಯ ಮುದ್ರಣಾಲಯವನ್ನು ಮುಚ್ಚಿಸಲಾಯಿತು.
ಜೈಲು ಶಿಕ್ಷೆ ಮುಗಿದಿದ್ದರೂ ದಂಡ ಕಟ್ಟಲು ಹಣವಿಲ್ಲದೆ ಪರದಾಡಿದ. ಪರಿಣಾಮ ಜೈಲಿನಲ್ಲೇ ಉಳಿಯಬೇಕಾಯಿತು. ಸಹಾಯಕ್ಕಾಗಿ ಮನವಿ ಮಾಡಿದ್ದ. ನನ್ನ ಮೇಲಿನ ತನಿಖೆ ೧೭೮೧ ರಿಂದ ಆರಂಭವಾಗಿ ಇಲ್ಲಿಯ ತನಕ ( ಸೆಪ್ಟೆಂಬರ್ ೧೭೮೩) ಜೈಲಿನಲ್ಲೇ ಇದ್ದೇನೆ. ನನ್ನ ಮಕ್ಕಳು ಸಹ ಈ ಕೊಳಕು ಜೈಲಿನಲ್ಲೆಯೇ ವಾಸಿಸುತ್ತಿದ್ದಾರೆ. ಜೈಲು ಶಿಕ್ಷೆ ಮುಗಿದಿದೆ ಆದರೆ ದಂಡಕಟ್ಟಲಾಗದೆ ಇಲ್ಲಿಯೇ ಇರಬೇಕಾಗಿದೆ. ಹಲವು ಸಲ ಸರ್ಕಾರಕ್ಕೆ ಮನವಿ ಮಾಡಿ ತನಗೆ ದಂಡದ ಮೊತ್ತದಿಂದ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದ. ಆದರೆ ಅವನ ಮನವಿಗಳಿಗೆ ಯಾರೂ ಸ್ಪಂದಿಸಲಿಲ್ಲ. ೧೨ ಜನರ ನನ್ನ ಸಂಸಾರ ದುಃಸ್ಥಿಯಲ್ಲಿದೆ ( ದಂಪತಿಗಳು ಮತ್ತು ೧೦ ಮಕ್ಕಳು) ಎಂದು ಅಂಗಲಾಚಿದ. ೧೭೮೪ ರ ಡಿಸೆಂಬರ್ ನಲ್ಲಿ ಈಸ್ಟ್ ಇಂಡಿಯಾ ಕಂಪನಿ ಕಾನೂನನ್ನು ಬದಲಿಸಿ, ಬ್ರಿಟಿಷ್ ಸರ್ಕಾರ ನೇರವಾಗಿ ಆಡಳಿತವನ್ನು ವಹಿಸಕೊಂಡಿತು. ಹೆಸ್ಟಿಂಗ್ಸ್ ಇಂಗ್ಲೆಂಡಿಗೆ ಹೊರಡುವುದಕ್ಕೆ ಮುನ್ನ ಹಿಕ್ಕಿ ನೀಡಬೇಕಾಗಿದ್ದ ದಂಡವನ್ನು ಮನ್ನಾ ಮಾಡಿಸಿದ.
ಹಿಕ್ಕಿ ಬ್ರಿಟಿಷ್ ಸೈನ್ಯಕ್ಕೆ ಹಿಂದೆ ಮಾಡಿದ್ದ ಮುದ್ರಣ ಕೆಲಸದ ಬಾಬತ್ತು ಆತನಿಗೆ ೪೩,೫೧೪ ಸಾವಿರ ರೂ ಬಾಕಿ ಬರಬೇಕಿತ್ತು. ಸೇನಾಧಿಕಾರಿ ವರ್ಗಾವಣೆಯಿಂದ ಈ ಮೊತ್ತ ಮಂಜೂರಾಗಿರಲಿಲ್ಲ. ಈ ಮೊತ್ತವನ್ನು ಬಡ್ಡಿಸಹಿತ ನೀಡುವಂತೆ ಹಲವು ಬಾರಿ ಪರಿಪರಿಯಾಗಿ ವಿನಂತಿಸಿದರೂ ಅಧಿಕಾರಿಗಳು ಸೊಪ್ಪು ಹಾಕಲಿಲ್ಲ. ನಾನಿನ್ನು ಬದುಕುಳಿಯಲಾರೆ ಎಂದು ೧೭೯೫ ರಲ್ಲಿ ಕೊನೆಯ ಮನವಿಪತ್ರ ಸಲ್ಲಿಸಿದ ನಂತರ ಮಾರ್ಚಿ ೭, ೧೭೯೫ ರಲ್ಲಿ ಆತನಿಗೆ ದೊರೆಯಬೇಕಾಗಿದ್ದ ಹಣದಲ್ಲಿ ಕಡಿತ ಮಾಡಿ ಕೇವಲ ೬,೭೧೧ ರೂ ನೀಡಲಾಯಿತು.
ಆರಂಭದಲ್ಲಿ ಹಿಕ್ಕಿ ಆದರ್ಶ ಪತ್ರಿಕೋದ್ಯಮ ತತ್ವಗಳ ಆಧಾರದಮೇಲೆ ಪತ್ರಿಕೆ ನಡೆಸಿದ. ಇಂಗ್ಲೆಂಡಿನಲ್ಲಿ ಪತ್ರಕರ್ತರು ಅನುಭವಿಸಿದ್ದ ಕಷ್ಟಕೋಟಲೆಗಳನ್ನು ಕಣ್ಣಾರೆ ಕಂಡಿದ್ದ. ನಾಗರಿಕ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಬಲವಾಗಿ ಬೆಂಬಲಿಸಿದ. ಭ್ರಷ್ಟಾಚಾರ ವಿರೋಧಿಸಿದ. ಆದರೆ ಎಲ್ಲೆಮೀರಿ ತನ್ನ ಸ್ವಾತಂತ್ರ್ಯ ಚಲಾಯಿಸಿದ. ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ, ಸೂಕ್ತ ದಾಖಲೆಗಳಿಲ್ಲದೆ ಅನೇಕ ಆರೋಪಗಳನ್ನು ಮಾಡಿದ. ಇದೇ ಅವನಿಗೆ ಮುಳುವಾಯಿತು. ವೈಯಕ್ತಿಕ ಮತ್ತು ಸಾರ್ವಜನಿಕ ತಪ್ಪುಹೊರಿಕೆಗಳ ನಡುವಿನ ವ್ಯತ್ಯಾಸಗಳನ್ನು ಆತ ಗಂಭೀರವಾಗಿ ಗಮನಿಸಲಿಲ್ಲ. ಅಧಿಕಾರವರ್ಗಕ್ಕೆ ಇದು ಸಾಕಾಗಿತ್ತು. ತನ್ನ ಪತ್ರಿಕೆಯ ಪ್ರಭಾವವನ್ನು ಮನಗಂಡು, ಮೈಮರೆತ. ಕೆಲದಿನಗಳ ನಂತರ ಒಂದು ರೀತಿಯ ಪ್ರಚೋದಕನಾಗಿ ಪರಿವರ್ತಿತನಾದ. ಸ್ಥಿಮಿತ ಕಳೆದುಕೊಂಡ. ಮಾನನಿಂದನೆಯನ್ನು ಲೆಕ್ಕಿಸಲೇ ಇಲ್ಲ. ಪತ್ರಿಕೆಯ ಹಲವು ಪ್ರತಿನಿಧಿಗಳ ವರದಿಗಳು ಸಹ ಇವನನ್ನು ದಾರಿತಪ್ಪಿಸಿದವು. ಆದರೂ ಈತ ಪತ್ರಿಕಾ ಸ್ವಾತಂತ್ರ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳಲ್ಲಿ ದೃಢವಾದ ನಂಬಿಕೆ ಇರಿಸಿದ್ದ. ಯುರೋಪಿಯನ್ನರು ಅನುಭವಿಸುವ ನಾಗರೀಕ ಸ್ವಾತಂತ್ರ್ಯಗಳನ್ನು ಇಲ್ಲಿಯ ಜನತೆ ಸಹ ಹೊಂದಬೇಕೆಂದು ಆತ ಬಲವಾಗಿ ನಂಬಿದ್ದ
ಹಿಕ್ಕಿಯ ಹಿನ್ನೆಲೆ ಏನು?
ತನ್ನ ೧೪ ನೇ ವಯಸ್ಸಿನಲ್ಲಿ ಲಂಡನ್ನಿನ ಮುದ್ರಣಾಲಯದಲ್ಲಿ ಹಿಕ್ಕಿ ಅಪ್ರೆಂಟಿಸ್ ಆಗಿ ಕೆಲಸ ಮಾಡಿ, ಮುದ್ರಣಕಲೆ ಕಲಿತ. ಕೆಲ ದಿನ ವಕೀಲರೊಬ್ಬರ ಸಹಾಯಕನಾಗಿ ದುಡಿದ. ಕೆಲಸಮಯ ವೈದ್ಯರೊಬ್ಬರ ಜತೆ ಕೆಲಸ ಮಾಡಿ ಔಷಧಿ ನೀಡುವ ಮತ್ತು ಸಣ್ಣಪುಟ್ಟ ಶಶ್ತ್ರಚಿಕಿತ್ಸೆ ಮಾಡುವುದನ್ನು ಕಲಿತಿದ್ದ. ಭಾರತಕ್ಕೆ ತೆರಳಿ ವಿದೇಶಿ ವ್ಯಾಪಾರ ಮಾಡಿ ಹಣಗಳಿಸುವ ಆಸೆಯಿಂದ ಭಾರತಕ್ಕೆ ಬಂದ.. ಇಂಗ್ಲೆಂಡಿನಿಂದ ಭಾರತಕ್ಕೆ ಹಡಗಿನಲ್ಲಿ ಬರಲು ೮-೧೦ ತಿಂಗಳು ಬೇಕಿತ್ತು. ಪ್ರಯಾಣಿಕರಿಗೆ ವೈದ್ಯಕೀಯ ನೆರವು ನೀಡಿ ಅಲ್ಲಿಯೂ ಹಣಗಳಿಸುತ್ತಿದ್ದ. ಕಲ್ಕತ್ತೆ ನಗರಕ್ಕೆ ಬಂದು ಹಿಕ್ಕಿ ಹಡಗಿನ ವ್ಯಾಪಾರ ಮಾಡಿ ಸಾಲದ ಸುಳಿಯಲ್ಲಿ ಸಿಕ್ಕು ಸಾಲ ತೀರಿಸಲಾರದೆ ಜೈಲುವಾಸ ಅನುಭವಿಸುತ್ತಿದ್ದಾಗ, ವಿಲಿಯಂ ಹಿಕ್ಕಿ ಎಂಬ ವಕೀಲರ ನೆರವಿನಿಂದ ಹೊರಬಂದು ಪತ್ರಿಕೆ ತೆರೆದ. ಇದೇ ವಕೀಲರು ಹಲವು ವರ್ಷಗಳ ನಂತರ ಭಾರತಕ್ಕೆ ಬಂದು ಪತ್ರಿಕೆ ಪ್ರಕಟಣೆ ನಂತರ ಜೈಲುಪಾಲಾಗಿದ್ದ ಹಿಕ್ಕಿಯನ್ನು ರಕ್ಷಿಸಿ ಬಿಡುಗಡೆಗೊಳಿಸಿದರು. ಅವನಿಗೆ ಬರಬೇಕಿದ್ದ ಕಂಪನಿ ಹಣವನ್ನು ದೊರಕಿಸಿಕೊಟ್ಟರು. ಹಿಕ್ಕಿ ಇಂಗ್ಲೆಂಡಿಗೆ ಮರಳಲು ‘ಏಜಾಕ್ಸ್’ ಎಂಬ ಹಡಗಿನಲ್ಲಿ ಮದರಾಸ್ ನಗರದ ಮೂಲಕ ಚೀನಾ ದೇಶದ ಕ್ಯಾಂಟನ್ ನಗರಕ್ಕೆ ಹೋಗಿ ಅಲ್ಲಿಂದ ಲಂಡನ್ ಗೆ ಪಯಣಿಸಬೇಕಿತ್ತು. ಮದರಾಸ್-ಕ್ಯಾಂಟನ್ ಪ್ರಯಾಣದ ನಡುವೆ, ಅಕ್ಟೋಬರ್ ೧೮೦೨ ರಲ್ಲಿ ಹಿಕ್ಕಿ ನಿಧನರಾದರೆಂದು, ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಆಧರಿಸಿ, ಇದನ್ನು ಅಂದಾಜಿಸಲಾಗಿದೆ. ಹಿಕ್ಕಿಯ ಭಾವಚಿತ್ರ ಲಭ್ಯವಿಲ್ಲ. ಅಂತರ್ಜಾಲದ ಲ್ಲಿ ಇರುವ ಹಿಕ್ಕಿ ನಾಮದ ಚಿತ್ರಗಳು ಈತನಿಗೆ ಸಂಬಂಧಿಸಿದವಲ್ಲ.
ಒಂದು ರೂ ಬೆಲೆಯ ಸುಮಾರು ೧೬೦೦ (೪೦೦ x ೪೦೦) ಪ್ರತಿಗಳನ್ನು ಮಾಸಿಕವಾಗಿ ಮುದ್ರಿಸಿ ಮತ್ತು ಜಾಹಿರಾತು ಆದಾಯ ಕೂಡಿ ಹಿಕ್ಕಿ ಪ್ರತಿ ತಿಂಗಳು ಸುಮಾರು ೨೦೦೦ ರು ಆದಾಯ ಹೊಂದಿದ್ದ ಎಂದು ಅಂದಾಜಿಸಲಾಗಿದೆ. ಹಲವರು ಚಂದಾ ಹಣವನ್ನು ನಿಗದಿತವಾಗಿ ನೀಡುತ್ತಿರಲಿಲ್ಲ.
ಹಿಕ್ಕಿಯ ಜೀವನ ಚರಿತ್ರೆಯ ಬಗ್ಗೆ ಪುನರಾಸಕ್ತಿ ಬೆಳೆಸಿದವನು ಅಮೆರಿಕೆಯ ಪತ್ರಿಕೋದ್ಯಮ ಅಧ್ಯಾಪಕ ಆಂಡ್ರೂ ಓಟಿಸ್ ಎಂಬಾತ. ಈತ ಗ್ರಂಥಾಲಯದಲ್ಲಿ ಕಂಡ ಒಂದು ಪುಸ್ತಕ, ಹಿಕ್ಕಿಯ ಬಗ್ಗೆ ಇವರ ಕುತೂಹಲ ಕೆರಳಿಸಿತು. ಜೇಮ್ಸ್ ಆಗಸ್ಟಸ್ ಹಿಕ್ಕಿಯ ವಕೀಲನಾಗಿದ್ದ, ವಿಲಿಯಂ ಹಿಕ್ಕಿ ಎಂಬಾತ , ದೇಶದ ಮೊದಲ ಪತ್ರಿಕೆ ಹೊರತಂದ ಹಿಕ್ಕಿ ಕುರಿತು ಕೆಲ ವಿವರಗಳನ್ನು ತನ್ನ ಆತ್ಮಚರಿತ್ರೆಯಲ್ಲಿ ಪ್ರಸ್ತಾಪಿಸಿದ್ದ. ಓಟಿಸ್ ಗೆ ಕುತೂಹಲ ಮೂಡಿ, ಲಂಡನ್ ನಲ್ಲಿರುವ ಗ್ರಂಥಾಲಯಗಳಲ್ಲಿ ಇರುವ ಹಳೆ ಭಾರತೀಯ ಪತ್ರಿಕೆಗಳ ಜಾಡು ಹಿಡಿದು ಪಯಣಿಸಿದ. ಫುಲ್ ಬ್ರೈಟ್ ಫೆಲೋಶಿಪ್ ಪಡೆದು ಕಲ್ಕತ್ತೆ, ದೆಹಲಿ, ಜರ್ಮನಿ, ಅಮೇರಿಕ ಮುಂತಾದ ದೇಶಗಳಲ್ಲಿ ಪಯಣಿಸಿ ಎಲ್ಲ ಮೂಲಗಳಿಂದ ಲಭ್ಯ ಮಾಹಿತಿ ಸಂಗ್ರಹಿಸಿದ. ೨೩೮ ವರ್ಷಗಳ ಹಿಂದಿನ ಪತ್ರಿಕಾ ಇತಿಹಾಸ ಪುನರ್ರಚನೆ ಅಷ್ಟು ಸುಲಭವಲ್ಲ. ಎಲ್ಲ ಪುಟಗಳಿರುವ ಹಿಕ್ಕಿ ಗೆಜೆಟ್ ನ ಕೇವಲ ನಾಲ್ಕು ಪ್ರತಿಗಳು ಮಾತ್ರ ಲಭ್ಯವಿರುವುದು ತಿಳಿಯಿತು. ಉಳಿದವೆಲ್ಲ ಹರಕು ಪ್ರತಿಗಳು ಮತ್ತು ಇತರೆ ದಾಖಲೆಗಳು. ಓಟಿಸ್ ತನ್ನ ಪುಸ್ತಕವನ್ನು ೨೦೧೮ ರಲ್ಲಿ ಪ್ರಕಟಿಸಿ ಹಲವಾರು ಹೊಸ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ.
ಹಿಕ್ಕಿಯ ವೈಯುಕ್ತಿಕ ಜೀವನದ ಮೇಲೆ ಇದುವರೆಗೂ ಯಾರೂ ಹೊರಗೆಡಹದ ಮಾಹಿತಿಗಳನ್ನು ಓಟಿಸ್ ತಿಳಿಸಿ, ಭಾರತೀಯ ಪತ್ರಿಕೋದ್ಯಮದ ಆದ್ಯ ಪುರುಷನ ಹೋರಾಟಗಳನ್ನು ದಾಖಲೆ ಸಹಿತ ಚಿತ್ರಿಸಿದ್ದಾರೆ. ಹಿಕ್ಕಿ ತರಬೇತಿ ನೀಡಿದ ಹಲವರು, ನಂತರದ ದಿನಗಳಲ್ಲಿ ಪತ್ರಿಕೆಗಳನ್ನು ಸ್ಥಾಪಿಸಿದರು. ಪತ್ರಿಕಾ ಸ್ವಾತಂತ್ರ್ಯದ ಮಹತ್ವವನ್ನು ಮನಗಂಡರು. ಆ ಹೋರಾಟದ ಪರಂಪರೆ ಈಗಲೂ ಜೀವಂತವಾಗಿದೆ. ಕಲ್ಕತ್ತೆ ನಗರ, ದೇಶದ ಸಾಹಿತ್ಯ ಮತ್ತು ರಾಜಕೀಯ ಚಿಂತನೆಗಳ ಕೇಂದ್ರ ಸ್ಥಾನವಾಯಿತು. ಇದಕ್ಕೆ ಮುನ್ನುಡಿ ಹಿಕ್ಕಿಯ ಹೋರಾಟದ ಚಿಂತನೆಗಳು. ಭ್ರಷ್ಟರ, ನಿರಂಕುಶ ಅಧಿಕಾರಿಗಳ ವಿರುದ್ಧ ಹಿಕ್ಕಿ ಸೆಣೆಸಿದ. ನೊಂದವರ ಜೀವನ ಸುಧಾರಣೆಗೆ ದುಡಿದು ತಾನೇ ನೊಂದಜೀವಿಯಾದ.
(ಲೇಖಕರು ವಿಶ್ರಾಂತ ಪತ್ರಿಕೋದ್ಯಮ ಪ್ರಾಧ್ಯಾಪಕರು ಮತ್ತು ಮಾಧ್ಯಮ ತಜ್ಞರು)
ಎ.ಎಸ್.ಬಾಲಸುಬ್ರಹ್ಮಣ್ಯ