Belagavi News In Kannada | News Belgaum

ಡಾ.ಬಾಬಾಸಾಹೇಬ ಅಂಬೇಡ್ಕರ್ ಭವನ ಉದ್ಘಾಟಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಬೆಳಗಾವಿಯ ಸಹ್ಯಾದ್ರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಹಾನ್ ಮಾನವತಾವಾದಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಭವನದ ಉದ್ಘಾಟನೆಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬರ ಆದರ್ಶಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಮಾರ್ಗದರ್ಶಿ, ಅವರೊಬ್ಬ ವ್ಯಕ್ತಿಯಲ್ಲ ದೊಡ್ಡಶಕ್ತಿ. ಸರ್ವರೂ ಆರಾಧಿಸುವ ಸರಳತೆಯ ಜ್ಞಾನಿ. ಜಗತ್ತಿನಲ್ಲೇ ಮಾದರಿ ಹಾಗೂ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದಾರೆ.  ಭಾರತದಂತಹ ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.


ಅಂಬೇಡ್ಕರ್ ಅವರ ಆದರ್ಶಗಳು ಸಾರ್ವಕಾಲಿಕವಾದವುಗಳು. ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ದಾಟಿಸಬೇಕಾದ ಕರ್ತವ್ಯ ನಮ್ಮದು. ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ಈ ಸಮುದಾಯ ಭವನ ಉದ್ಘಾಟಿಸುತ್ತಿರುವುದು ನನ್ನ ಪಾಲಿನ ಭಾಗ್ಯವೇ ಸರಿ ಎಂದು ಹೆಬ್ಬಾಳಕರ್ ಹೇಳಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ, ಎಂ ಜೆ ಮಂಕಾಳೆ, ಡಾ. ಸಾವುಕಾರ ಕಾಂಬಳೆ, ಡಾ. ಎಚ್ ಬಿ ಕೋಲ್ಕಾರ, ಅಶೋಕ ನಿಂಗಪ್ಪಗೋಳ, ವಿಜಯಕುಮಾರ ಹತ್ತಿ, ಎಸ್ ಡಿ ಕಾಂಬಳೆ, ನಾಮದೇವ ಹತ್ತಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.///////