Belagavi News In Kannada | News Belgaum

ಸಿದ್ದು ವಿರುದ್ಧ ಒಂದಾಗಬೇಕಿದ್ದBJP ನಾಯಕರಲ್ಲೇ ಬಿರುಕು

ಕೋಲಾರ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈ ಮಧ್ಯೆ ಕಾಂಗ್ರೆಸ್​ ಮುಂದಿನ ಸಿಎಂ ಎಂದೇ ಬಿಂಬಿತವಾಗಿರೋ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರದಿಂದಲೇ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ.

 

ಹೀಗಿರುವಾಗ ಹೇಗಾದ್ರೂ ಸರಿ ಸಿದ್ದರಾಮಯ್ಯರನ್ನು ಸೋಲಿಸಲೇಬೇಕು ಎಂದು ಜೆಡಿಎಸ್​​, ಬಿಜೆಪಿ ಪಣತೊಟ್ಟಿವೆ. ಅದರಲ್ಲೂ ಕುರುಬ ಸಮಾಜದ ಪ್ರಬಲ ನಾಯಕ, ಮಾಜಿ ಶಾಸಕ ವರ್ತೂರು ಪ್ರಕಾಶ್​ ಹಗಲು ರಾತ್ರಿಯೆನ್ನದೇ ಗೆಲ್ಲಲು ಶ್ರಮಿಸುತ್ತಿದ್ದಾರೆ. ಒಂದೆಡೆ ತನಗೆ ಬಿಜೆಪಿ ಟಿಕೆಟ್​ ಪಕ್ಕಾ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್​​ ಕ್ಯಾಂಪೇನ್​ ಶುರು ಮಾಡಿದ್ದಾರೆ. ಈ ಮಧ್ಯೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕೋಲಾರದಿಂದ ಕಣಕ್ಕಿಳಿದು ಹತ್ತಾರು ಸಾವಿರ ಮತ ಪಡೆದಿದ್ದ ಆರ್​ಎಸ್​ಎಸ್​ ನಿಷ್ಠಾವಂತ ಕಾರ್ಯಕರ್ತ ಓಂ ಶಕ್ತಿ ಚಲಪತಿ ತನಗೂ ಟಿಕೆಟ್​ ಬೇಕು ಎಂದು ಪಟ್ಟು ಹಿಡಿದಿದ್ದಾರೆ.

 

ಈ ಸಂಬಂಧ ಮಾತಾಡಿದ ಓಂ ಶಕ್ತಿ ಚಲಪತಿ, ನಾನೇ ಕೋಲಾರದ ಬಿಜೆಪಿ ಅಭ್ಯರ್ಥಿ. ಕೋವಿಡ್​​ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಹೈಕಮಾಂಡ್​​ ನನಗೆ ಟಿಕೆಟ್​ ನೀಡುವ ಭರವಸೆ ಕೊಟ್ಟಿದೆ. ಇತ್ತೀಚೆಗೆ 6 ತಿಂಗಳಿನಿಂದ ಕ್ಷೇತ್ರದಲ್ಲಿ ಓಡಾಡುತ್ತಿರೋ ವ್ಯಕ್ತಿಯೋರ್ವ ನಾನೇ ಕೋಲಾರದ ಬಿಜೆಪಿ ಅಭ್ಯರ್ಥಿ ಎನ್ನುತ್ತಿದ್ದಾರೆ ಎಂದು ವರ್ತೂರು ಪ್ರಕಾಶ್​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

 

ನಾನು ಬಿಜೆಪಿಯಲ್ಲಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಾನು ಆರ್​ಎಸ್​ಎಸ್​ನ ಸಕ್ರಿಯ ಕಾರ್ಯಕರ್ತ. ಯಾರೋ ಉಸ್ತುವಾರಿ ಸಚಿವರು ಬಂದು ಇವರೇ ಕೋಲಾರದ ಬಿಜೆಪಿ ಅಭ್ಯರ್ಥಿ ಎಂದ ಕೂಡಲೇ ಆಗೋದಿಲ್ಲ. ದೆಹಲಿಯಲ್ಲಿರೋ ಹೈಕಮಾಂಡ್​​ ಅಭ್ಯರ್ಥಿಗಳ ಪಟ್ಟಿ ರಿಲೀಸ್​ ಮಾಡಬೇಕು. ಬಿ.ಎಲ್​​ ಸಂತೋಷ್​ ಅವರು ನನಗೆ ಟಿಕೆಟ್​ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು.