ಜೊಲ್ಲೆ ಮಾಲೀಕತ್ವದ ಬ್ಯಾಂಕ್‌ಗೆ ಕನ್ನ; ಆರೋಪಿಗಳು ಅರೆಸ್ಟ್

ಧಾರವಾಡ: ಸಚಿವೆ ಶಶಿಕಲಾ ಜೊಲ್ಲೆ ಮಾಲೀಕತ್ವದ ಧಾರವಾಡದಲ್ಲಿರುವ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಇತ್ತೀಚಿಗೆ ನಡೆದಿದ್ದ ಕಳ್ಳತನ ಪ್ರಕರಣವನ್ನು ಧಾರವಾಡ ಶಹರ ಠಾಣೆ ಪೊಲೀಸರು ಬೇಧಿಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 600 ಗ್ರಾಂಗಳಿಗೂ ಅಧಿಕ ತೂಕದ ಚಿನ್ನಾಭರಣಗಳು ಹಾಗೂ 18 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವೈಷ್ಣವಿ ಹಾಗೂ ಅದೇ ಸೊಸೈಟಿಯ ಮಾಜಿ ಉದ್ಯೋಗಿ ಬೆಳಗಾವಿಯ ಯುವರಾಜ್ ಆರೋಪಿಗಳು ಎಂದು ಗುರುತಿಸಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಸತತ ಕಾರ್ಯಾಚರಣೆ ನಡೆಸಿ ಈ ಪ್ರಕರಣವನ್ನು ಬೇಧಿಸಿದ ಶಹರ ಠಾಣೆ ಇನ್ಸ್‌ಪೆಕ್ಟರ್ ಪ್ರಭು ಗಂಗೇನಹಳ್ಳಿ ಹಾಗೂ ತಂಡಕ್ಕೆ ಪೊಲೀಸ್ ಆಯುಕ್ತ ರಮಣ್ ಗುಪ್ತಾ 25 ಸಾವಿರ ರೂಪಾಯಿ ನಗದು ಬಹುಮಾನ ನೀಡಿದ್ದಾರೆ.
ಕಳೆದ ಡಿಸೆಂಬರ್ 31 ರಂದು ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿಗೆ ಕನ್ನ ಹಾಕಲಾಗಿತ್ತು. ಆರೋಪಿಗಳು ಸೊಸೈಟಿಯಲ್ಲಿನ ಚಿನ್ನಾಭರಣ ಹಾಗೂ ನಗದು ದೋಚಿ ಸೊಸೈಟಿಯಲ್ಲಿನ ಸಿಸಿ ಕ್ಯಾಮೆರಾಗಳಿಗೂ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಇವರು ಯೂಟ್ಯೂಬ್ ನೋಡಿ ಕಳ್ಳತನ ಮಾಡುವುದನ್ನು ಕಲಿತು ಚಾಣಾಕ್ಷತನದಿಂದ ಪಾರಾಗಲು ಯತ್ನಿಸಿದ್ದರು. ಆದರೆ, ಪೊಲೀಸರು ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ರಮಣ್ ಗುಪ್ತಾ ಮಾಹಿತಿ ನೀಡಿದರು.
ಬಂಧಿತರಿಂದ ಚಿನ್ನಾಭರಣ ಹಾಗೂ ನಗದು ಸೇರಿ ಒಟ್ಟು 40 ಲಕ್ಷ ಮೌಲ್ಯದ ಸಾಮಾನುಗಳನ್ನು ಜಪ್ತಿ ಮಾಡಿದ್ದಾರೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಪೊಲೀಸರು ಈ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದು ಗಮನಾರ್ಹ ಸಂಗತಿಯಾಗಿದೆ. ಸದ್ಯ ಆರೋಪಿಗಳಾದ ಯುವರಾಜ್ ಮತ್ತು ವೈಷ್ಣವಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇವರೊಂದಿಗೆ ಇನ್ನು ಕೆಲವರು ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆ ನಿಟ್ಟಿನಲ್ಲೂ ಸಹ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ಯುಟ್ಯೂಬ್ ನೋಡಿ ಕಳ್ಳತನ ಕಲಿತಿದ್ದರು ಎನ್ನಲಾಗುತ್ತಿದ್ದು, ಇದೀಗ ಇಬ್ಬರೂ ಕಂಬಿ ಎಣಿಸುವಂತಾಗಿದೆ.
ಇನ್ನು ಈ ಕಳ್ಳತನದಲ್ಲಿ ಭಾಗಿಯಾಗಿರುವ ಯುವರಾಜ್ ಮತ್ತು ವೈಷ್ಣವಿ ಜೋಡಿಯ ಹಿನ್ನೆಲೆಗೂ ಬ್ಯಾಂಕ್ ಸಂಬಂಧವಿದೆ ಎನ್ನುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿ ಯುವರಾಜ್, ಜೊಲ್ಲೆ ಸಮೂಹ ಸಂಸ್ಥೆಗಳ ಮುಖ್ಯ ಕಚೇರಿ ಇರುವ ಯಕ್ಸಂಬಾ ಗ್ರಾಮದವನೇ ಆಗಿದ್ದು, ಜೊತೆಗೆ ಬೀರೇಶ್ವರ ಕೋ ಆಪ್ ಸೊಸೈಟಿ ಮಾಜಿ ಉದ್ಯೋಗಿ ಎನ್ನಲಾಗಿದೆ. ಕಳ್ಳತನ ಪ್ರಕರಣದಲ್ಲಿ ಈತನಿಗೆ ಸಹಾಯ ಮಾಡಿರುವ ವೈಷ್ಣವಿ ಧಾರವಾಡದ ನಿವಾಸಿಯಾಗಿದ್ದು, ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಸಂಸ್ಥೆಯ ನಿರ್ದೇಶಕರೊಬ್ಬರ ಮಗಳು ಎನ್ನುವ ಮಾಹಿತಿ ಲಭ್ಯವಾಗಿದೆ.