Belagavi News In Kannada | News Belgaum

ಐತಿಹಾಸಿಕ ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ ತ್ರಿಕೂಟೇಶ್ವರ ಜೈನ ಮಂದಿರ ಅಭಿವೃದ್ಧಿಯಿಂದ ವಂಚಿತ

ಬೈಲಹೊಂಗಲ- ಪುರಾತನ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಬೈಲಹೊಂಗಲ ತಾಲೂಕಿನ ಐತಿಹಾಸಿಕ ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ ತ್ರಿಕೂಟೇಶ್ವರ ಜೈನ ಮಂದಿರ ಅಭಿವೃದ್ಧಿಯಿಂದ ವಂಚಿತವಾಗಿದೆ.

ಇದು ಕ್ರಿ.ಶ. 11ನೇ ಶತಮಾನಕ್ಕಿಂತಲೂ ಹಳೆಯದಾದ ಶಿಲ್ಪ ಮಂದಿರ. ಸುತ್ತಲೂ ಮಲಪ್ರಭೆ ನದಿ, ನಟ್ಟ ನಡುವೆ ಎತ್ತರದ ಪ್ರದೇಶದ ಮೇಲೆ ತಲೆ ಎತ್ತಿ ನಿಂತಿರುವ ತ್ರಿಕೂಟೇಶ್ವರ(ಕಲಗುಡಿ). ಒಕ್ಕುಂದ ಗ್ರಾಮದಿಂದ ಸುಮಾರು 2 ಕಿ.ಮೀ. ಪೂರ್ವಕ್ಕೆ ಹೋದರೆ ಮುಳುಗಡೆಯಾದ ಹಳೆಯ ಒಕ್ಕುಂದ ಊರು ಸಿಗುತ್ತದೆ. ಅಲ್ಲಿಯೇ ಎತ್ತರದ ಪ್ರದೇಶದ ಮೇಲೆಯೇ ಸುಂದರವಾಗಿ ನಿರ್ಮಿಸಿರುವ ಐತಿಹಾಸಿಕ ಶಿಲ್ಪ ಮಂದಿರಗಳು ಕಾಣ ಸಿಗುತ್ತವೆ. ಇಲ್ಲಿ ಮೂರು ಮಂದಿರಗಳಿವೆ. ಹೀಗಾಗಿ ಇದಕ್ಕೆ ತ್ರಿಕೂಟೇಶ್ವರ ಎಂದು ಕರೆಯಲಾಗುತ್ತದೆ. ಆದರೆ ಆಡು ಭಾಷೆಯಲ್ಲಿ ಕಲಗುಡಿ ಎಂದು ಗ್ರಾಮಸ್ಥರು ಕರೆಯುತ್ತಾರೆ.

 

ಜೈನ ಬಸದಿಯಾಗಿದ್ದ ಇದರಲ್ಲಿ ಸಧ್ಯ ಒಂದು ಶಿವಲಿಂಗ ಇಡಲಾಗಿದೆ. ಇಲ್ಲಿ ಸುಂದರವಾದ ಶಿಲ್ಪಕಲಾ ಕೌಶಲ್ಯದಿಂದ ಶೋಭಿಸುವ ಮೂರು ಪ್ರಾಚೀನ ಜಿನಾಲಯಗಳಿವೆ. ಅವು ತೀರ್ಥಂಕರರ ಮೂರ್ತಿಯನ್ನು ಕಳೆದುಕೊಂಡು ಶಿವಲಿಂಗವನ್ನು ಪಡೆದುಕೊಂಡು ದೇವಾಲಯಗಳ ಸ್ವರೂಪ ಪಡೆದಿದ್ದರೂ ಹೊರ ಹಾಗೂ ಒಳ ಮಗ್ಗಲಿನಲ್ಲಿಯ ಜಿನ ಬಿಂಬಗಳು ತಮ್ಮ ಬಸದಿ ಸ್ವರೂಪದ ಕುರುಹುಗಳನ್ನು ಉಳಿಸಿಕೊಂಡಿವೆ.

ಏನಿದು ತಿರುಳ್ಗನ್ನಡನಾಡು..?
ಬಾದಾಮಿ ಚಾಲುಕ್ಯರ ತರುವಾಯ ಕರ್ನಾಟಕ ಸಾಮ್ರಾಜ್ಯದ ವೈಭವ ಪರಾಕಾಷ್ಟತೆಗೆ ಒಯ್ದುವರು ರಾಷ್ಟ್ರಕೂಟರು. ಈ ವಂಶದ ಅರಸರಲ್ಲಿ 1ನೇಯ ಕೃಷ್ಣ, ಇಮ್ಮಡಿ ಗೋವಿಂದ, ಧ್ರುವ, ಮುಮ್ಮಡಿ ಗೋವಿಂದ ಮೊದಲಾದವರು ಈ ನಾಡಿನಲ್ಲಿ ಆಡಳಿತ ನಡೆಸಿದವರು, ಇವರಲ್ಲಿ ಈ ನಾಡ ಕೀರ್ತಿ ಇಂದಿಗೂ ಕಣ್ಣಿಗೆ ಕಟ್ಟುವ ಹಾಗೆ ನಿರ್ಮಿಸಿದ ಶ್ರೇಯಸ್ಸು ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲಿ ಹೊರಡಿಸಿದ “ಕವಿರಾಜ ಮಾರ್ಗ” ಗ್ರಂಥವು ಕನ್ನಡ ಭಾಷೆಯಲ್ಲಿ ದೊರೆತ ಪ್ರಪ್ರಥಮ ಗ್ರಂಥವಿದು. ಇದರಲ್ಲಿ ಗ್ರಂಥಕಾರ ಶ್ರೀವಿಜಯ ಕೊಪ್ಪಳ, ಲಕ್ಷ್ಮೇಶ್ವರ, ಪಟ್ಟದಕಲ್ಲು ಮತ್ತು ಒಕ್ಕುಂದ ಈ ನಾಲ್ಕು ನಾಡುಗಳನ್ನು ತಿರುಳ್ಗನ್ನಡ ನಾಡು ಎಂದು ಬಣ್ಣಿಸಿದ್ದಾರೆ.

 

ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ವ್ಯಾಪಿಸಿತ್ತು:
ಕವಿರಾಜ ಮಾರ್ಗ ಸೂಚಿಸಿರುವ ಹಾಗೆ ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ವ್ಯಾಪಿಸಿದೆ. ಇಲ್ಲಿರುವ ಜನಪದವು ಸುಪ್ರಸಿದ್ಧ ವಿಷಯಗಳಿಗೆ ಮಿಗಿಲಾಗಿದ್ದು, ಆ ಜನಪದದೊಳಗೆ ಕಿಸುವೊಳಲು(ಇಂದಿನ ಪಟ್ಟದಕಲ್ಲು) ಕೊಪಣ ನಗರ (ಇಂದಿನ ಕೊಪ್ಪಳ) ಪುಲಿಗೇರಿ(ಇಂದಿನ ಲಕ್ಷ್ಮೇಶ್ವರ) ಒಂಕ್ಕುಂದ( ಇಂದಿನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಒಕ್ಕುಂದ ಗ್ರಾಮ) ಈ ನಾಲ್ಕು ಊರುಗಳು ಕನ್ನಡ ನಾಡಿನ ದೇವಿಯ ಮುಕುಟಕ್ಕೆ ನಾಲ್ಕು ದಿಕ್ಕುಗಳಲ್ಲಿ ಹಚ್ಚಿಟ್ಟ ನಂದಾದೀಪದಂತೆ ಭಾಸವಾಗುತ್ತದೆ.

ಆದಿಕವಿ ಪಂಪನು ತನ್ನ “ವಿಕ್ರಮಾರ್ಜುನ ವಿಜಯ”ದಲ್ಲಿ ಸಾಜದ ಪುಲಿಗೇರಿಯ ತಿರುಳ್ಗನ್ನಡದೊಳ್ ಎಂದಿರುವುದರಿಂದ ಈ ತಿರುಳ್ಗನ್ನಡ ಕನ್ನಡ ಭಾಷೆಯ ವಿಶೇಷತೆಯನ್ನು ಸೂಚಿಸುತ್ತದೆ. ಇದಕ್ಕೆ ಬೆಂಬಲವಾಗಿ ನಿಂತಂತೆ ರನ್ನನು ತನ್ನ “ಸಾಹಸ ಭೀಮ ವಿಜಯ” ದಲ್ಲಿ ಕನ್ನಡದ ಮೆರಡರನೊ ರ ರ ಕನ್ನಡಮಾ ತಿರುಳು ಕನ್ನಡಂ ಎಂದಿರುವುದರಿಂದ ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ಪ್ರದೇಶವಿದ್ದರೂ ಅದರ ತಿರುಳು ಮಾತ್ರ ಈ ಭಾಗದಲ್ಲಿ ಇತ್ತು ಎಂಬುದು ಖಚಿತವಾಗುತ್ತದೆ. ಈಗ ಬೆಳಗಾವಿ ನಮ್ಮದು ಎನ್ನುತ್ತಿರುವ ಮಹಾರಾಷ್ಟ್ರದವರು ಈ ನೈಜ ಇತಿಹಾಸ ತಿಳಿದರೆ ಕನ್ನಡ ನಾಡಿನ ವಿಸ್ತಾರತೆ ಎಷ್ಟಿತ್ತು ಎಂಬುದು ಗೊತ್ತಾಗುತ್ತದೆ.

ಒಕ್ಕುಂದ ಉತ್ಸವ ಸರಕಾರಿ ಉತ್ಸವ ಆಗಲಿ:
ಈ ಇತಿಹಾಸವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಗ್ರಾಮದ ಉತ್ಸಾಹಿ ಯುವಕರು, ಹಿರಿಯರು ಕಳೆದ ಏಳು ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ಪ್ರತಿವರ್ಷ ಫೆ.1ರಂದು ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಇದು ಸರಕಾರಿ ಉತ್ಸವ ಆಗಬೇಕು, ಈ ಶಿಲ್ಪ ಮಂದಿರದ ಜೀರ್ಣೋದ್ಧಾರವಾಗಿ ಪ್ರಸಿದ್ಧ ಪ್ರವಾಸಿ ತಾಣ ಆಗಬೇಕು ಎಂಬುದು ಗ್ರಾಮಸ್ಥರ ಮಹದಾಸೆಯಾಗಿದೆ.

ಇಂದು ಉತ್ಸವ ನಿಮಿತ್ಯ ವಿವಿಧ ಕಾರ್ಯಕ್ರಮಗಳು:
ಫೆ.1ರಂದು ನಡೆಯಲಿರುವ ಉತ್ಸವ ಕಾರ್ಯಕ್ರಮದಲ್ಲಿ ಬೆಳಗ್ಗೆ 9 ಗಂಟೆಗೆ ಅಮೋಘವರ್ಷ ನೃಪತುಂಗ ಜ್ಯೋತಿ ಯಾತ್ರೆಗೆ ಗ್ರಾಮದ ಮಲಪ್ರಭಾ ನದಿ ದಡದಲ್ಲಿ ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಚಾಲನೆ ನೀಡಲಿದ್ದಾರೆ. ನಂತರ ಸಾಯಂಕಾಲ 6 ಗಂಟೆಗೆ ಪ್ರೌಢಶಾಲಾ ಮೈದಾನದಲ್ಲಿ ಆವರಣದ ನೃಪತುಂಗ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಗ್ರಾ. ಪಂ. ಅಧ್ಯಕ್ಷೆ ಸವಿತಾ ಹೂವಿನ ಅಧ್ಯಕ್ಷತೆ ವಹಿಸುವರು. ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸುವರು. ರಾಚೋಟಿ ಸ್ವಾಮೀಜಿ ಮತ್ತು ನಯಾನಗರದ ಅಭಿನವ ಸಿದ್ಧಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು.

 

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ. ಒಕ್ಕುಂದ ಇತಿಹಾಸ ಕುರಿತು ವಿಮರ್ಶಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಉಪನ್ಯಾಸ ನೀಡುವರು. ಕಲಾವಿದರಾದ ದೊಡ್ಡಪ್ಪ ಮಾದರ, ಬಸವರಾಜ ನರೇಂದ್ರ, ಮುದಕಣ್ಣ ಮೊರಬದ, ಗದಗನ ಪವಿತ್ರಾ ಮತ್ತು ಮಾಲಾಶ್ರೀ, ಗೋಕಾಕ ಮನೋಜ ಕಾಮಿಡಿ ತಂಡ ಹಾಗೂ ಗ್ರಾಮದ ಕಲಾವಿದರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.