ವಿಷ್ಣುವರ್ಧನ್ ಅವರ ಸ್ಮಾರಕ ರಾಜ್ಯ ಸರ್ಕಾರ ಹನ್ನೊಂದು ಕೋಟಿಯನ್ನು ನಿರ್ಮಾಣಕ್ಕೆ ಖರ್ಚು

ಬೆಂಗಳೂರು: ಕನ್ನಡದ ಮೇರುನಟರಲ್ಲಿ ಓರ್ವರಾದ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿನ್ನೆಯಷ್ಟೇ ( ಜನವರಿ 29 ) ಲೋಕಾರ್ಪಣೆಗೊಂಡಿದೆ. ಮೈಸೂರಿನ ಎಚ್ ಡಿ ಕೋಟೆ ರಸ್ತೆಯಲ್ಲಿರುವ ಹಾಲಾಳು ಗ್ರಾಮದಲ್ಲಿ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರ ಹನ್ನೊಂದು ಕೋಟಿಯನ್ನು ನಿರ್ಮಾಣಕ್ಕೆ ಖರ್ಚು ಮಾಡಿದೆ.
ವಿಷ್ಣುವರ್ಧನ್ ನಿದನ ಹೊಂದಿ ಹದಿಮೂರು ವರ್ಷಗಳ ಬಳಿಕ ಕೊನೆಗೂ ಸ್ಮಾರಕ ನಿರ್ಮಾಣವಾದದ್ದು ಅಭಿಮಾನಿಗಳಿಗೆ ದೊಡ್ಡ ಮಟ್ಟದ ಖುಷಿಯನ್ನು ತಂದುಕೊಟ್ಟಿತ್ತು. ಮೈಸೂರಿಗೆ ರಾಜ್ಯದ ಮೂಲೆ ಮೂಲೆಯಿಂದ ವಿಷ್ಣು ಅಭಿಮಾನಿಗಳು ಆಗಮಿಸಿ ಸ್ಮಾರಕವನ್ನು ವೀಕ್ಷಿಸಿ ತಮ್ಮ ಬಹು ವರ್ಷಗಳ ಆಸೆ ಈಡೇರಿತಲ್ಲಾ ಎಂದು ಭಾವುಕರಾದರು. ಇನ್ನು ವಿಷ್ಣುವರ್ಧನ್ ಅಭಿಮಾನಿಗಳು ಮಾತ್ರವಲ್ಲದೇ ಕನ್ನಡ ಚಲನಚಿತ್ರರಂಗದ ಸ್ಟಾರ್ ನಟರೂ ಸಹ ವಿಷ್ಣು ಸ್ಮಾರಕದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡು ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.
ನಿನ್ನೆ ಕಿಚ್ಚ ಸುದೀಪ್, ಶಿವ ರಾಜ್‌ಕುಮಾರ್ ಹಾಗೂ ದುನಿಯಾ ವಿಜಯ್ ಸೇರಿದಂತೆ ಹಲವು ಸ್ಟಾರ್ ನಟರು ವಿಷ್ಣು ಸ್ಮಾರಕದ ಬಗ್ಗೆ ಟ್ವೀಟ್ ಮಾಡಿದ್ದರು. ಈ ಸಾಲಿಗೆ ಇದೀಗ ಕನ್ನಡ ಚಲನಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹಾಗೂ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸೇರಿಕೊಂಡಿದ್ದಾರೆ. ಈ ಇಬ್ಬರೂ ಸಹ ವಿಷ್ಣುವರ್ಧನ್ ಸ್ಮಾರಕದ ಕುರಿತು ಈ ಕೆಳಕಂಡಂತೆ ಟ್ವೀಟ್ ಮಾಡಿದ್ದಾರೆ.
ಇಬ್ಬರಿಗೆ ಧನ್ಯವಾದ ತಿಳಿಸಿದ ದರ್ಶನ್
ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾದದ್ದರ ಕುರಿತು ಇಂದು ಟ್ವೀಟ್ ಮಾಡಿರುವ ದರ್ಶನ್ ಸ್ಮಾರಕದಲ್ಲಿ ಇರಿಸಲಾಗಿರುವ ವಿಷ್ಣುವರ್ಧನ್ ಅವರ ಪುತ್ಥಳಿಯ ಫೋಟೊವನ್ನು ಹಂಚಿಕೊಂಡು “ಸಾಹಸಸಿಂಹ ಡಾ. ವಿಷ್ಣು ದಾದಾರವರ ಸ್ಮಾರಕ ಕೊನೆಗೂ ನಮ್ಮ ಮೈಸೂರಿನಲ್ಲಿ ಲೋಕಾರ್ಪಣೆ ನೆರವೇರಿದೆ, ಕನ್ನಡ ನಾಡಿಗೆ ವಿಷ್ಣು ಸರ್ ರವರ ಕೊಡುಗೆ ಅಪಾರವಾದದ್ದು. ಇದಕ್ಕೆ ಮುಖ್ಯಕಾರಣಕರ್ತರಾಗಿರುವ ದಾದಾ ಅಭಿಮಾನಿಗಳು ಹಾಗೂ ಕುಟುಂಬಕ್ಕೆ ಅನಂತ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸ್ಮಾರಕ ನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರಾದ ಅಭಿಮಾನಿಗಳು ಹಾಗೂ ವಿಷ್ಣು ಕುಟುಂಬಕ್ಕೆ ದರ್ಶನ್ ಕೃತಜ್ಞತೆ ತಿಳಿಸಿದ್ದಾರೆ.