Belagavi News In Kannada | News Belgaum

ಬುದ್ದಿ ಹೇಳಿದ್ದಕೆ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆ

ಮಂಗಳೂರು: ಯಾವಾಗಲೂ ಮೊಬೈಲ್ ನೋಡುತ್ತಾನೆಂದು ತಾಯಿ ಮಗನನ್ನು ಬೈದಿದ್ದಕ್ಕೆ ಮನೆಯಲ್ಲಿ ಬಾಲಕ ಆತ್ಮಹತ್ಯೆಗೆ  ಶರಣಾಗಿರುವ ಘಟನೆ ಮಂಗಳೂರು ನಗರದ ಕುಲಶೇಖರದಲ್ಲಿ ನಡೆದಿದೆ.

ನಗರದ ಕುಲಶೇಖರದ ನಿವಾಸಿ ಜಗದೀಶ್ ಹಾಗೂ ವಿನಯಾ ದಂಪತಿಯ ಪುತ್ರ ಜ್ಞಾನೇಶ್, ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಾವಾಗಲೂ ಮೊಬೈಲ್ ನೋಡುತ್ತಾನೆಂದು ತಾಯಿ ಮಗನನ್ನು ಬೈದಿದ್ದು, ಇದರಿಂದ ಖಿನ್ನನಾಗಿದ್ದ ಬಾಲಕ ಸೋಮವಾರ ರಾತ್ರಿ 8:30ರ ವೇಳೆಗೆ ತಾಯಿ ಎದುರಲ್ಲೇ ಮನೆಯ ಕೋಣೆಗೆ ತೆರಳಿದ್ದ. ಮಗ ಸ್ನಾನಕ್ಕೆ ಹೋಗಿದ್ದಾನೆಂದು ಮನೆಯವರು ತಮ್ಮ ಪಾಡಿಗೆ ಇದ್ದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಕಿಟಕಿಯಲ್ಲಿ ನೋಡಿದರೆ, ಬಾಲಕ ಫ್ಯಾನಿಗೆ ಶಾಲು ಬಿಗಿದು ಕೊರಳೊಡ್ಡಿದ್ದಾನೆ. ತಕ್ಷಣ ಶಾಲು ಬಿಚ್ಚಲಾಯಿತಾದರೂ ಆದಾಗಲೇ ಬಾಲಕ ಬಾರದ ಲೋಕಕ್ಕೆ ಹೋಗಿದ್ದ. ಒಂದು ಕ್ಷಣದ ಸಿಟ್ಟು, ಆವೇಶಕ್ಕೆ ಬಾಲಕ ತನ್ನ ಜೀವನವನ್ನೇ ಕೊನೆಗೊಳಿಸಿದ್ದಾನೆ.
ಕುಲಶೇಖರದ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಜ್ಞಾನೇಶ್ ಕಲಿಯುವುದರಲ್ಲೂ ಮುಂದಿದ್ದ. ಆದರೆ ಮೊಬೈಲ್, ಟಿವಿಯ ಹುಚ್ಚಿನ ಜೊತೆಗೆ ತುಂಟಾಟವೂ ಹೆಚ್ಚಿತ್ತು. ಆಟವಾಡಿಕೊಂಡಿರುತ್ತಿದ್ದ ಬಾಲಕ ದಿಢೀರ್ ಎಂದು ಕಣ್ಮರೆಯಾಗಿರುವುದು ಶಾಲೆಯ ಮಕ್ಕಳನ್ನೂ ಕಣ್ಣೀರ ಕಡಲಲ್ಲಿ ಮುಳುಗಿಸಿದೆ. ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕಿಯರು ಮೃತ ಬಾಲಕನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಆದರೆ ಬಾಲಕನ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಲು ಶಿಕ್ಷಕಿಯರು ನಿರಾಕರಿಸಿದ್ದಾರೆ.
ಬಾಲಕನ ಸಾವಿಗೆ ಮೊಬೈಲ್ ಹುಚ್ಚಾಟ ಕಾರಣವೋ ಅಥವಾ ಆನ್‌ಲೈನ್ ಗೇಮ್ ಹುಚ್ಚು ಅಂಟಿಕೊಂಡಿತ್ತೋ ಗೊತ್ತಿಲ್ಲ. ಕಣ್ಣೆದುರಲ್ಲಿ ಬೆಳೆದು ನಿಂತಿದ್ದ ಮಗ ದಿಢೀರ್ ಎಂಬಂತೆ ಇನ್ನಿಲ್ಲವಾಗಿರುವುದಕ್ಕೆ ಹೆತ್ತವರು ಮಾತ್ರ ದಿಗ್ಭ್ರಾಂತಿಗೆ ಒಳಗಾಗಿದ್ದಾರೆ. ಶಾಲೆಯ ಆವರಣದಲ್ಲಿ ಮಕ್ಕಳ ಮೊಬೈಲ್ ಹುಚ್ಚಾಟವೇ ಇಂತಹ ದುರಂತಗಳಿಗೆ ಕಾರಣ ಎನ್ನುವ ಮಾತು ಕೇಳಿಬರುತ್ತಿದೆ.