Belagavi News In Kannada | News Belgaum

ಸಮಗ್ರ ಅಭಿವೃದ್ದಿ ಪಡಿಸಿ ಪ್ರವಾಸಿ ತಾಣವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ : ಉಪವಿಭಾಗಾಧಿಕಾರಿ ಶ್ರೀಮತಿ ಪ್ರಭಾವತಿ

ಬೈಲಹೊಂಗಲ- ಉಪವಿಭಾಗದ ಜನತೆಗೆ ಮೂಲಭೂತ ಸೌಕರ್ಯ, ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮನ ಸಮಾಧಿ, ಕಿತ್ತೂರು ಹಾಗೂ ಕಿತ್ತೂರು ಸಂಸ್ಥಾನಕ್ಕೆ ಒಳಪಡುವ ಕುರುಹುಗಳನ್ನು ಸಮಗ್ರ ಅಭಿವೃದ್ದಿ ಪಡಿಸಿ ಪ್ರವಾಸಿ ತಾಣವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ನೂತನ ಉಪವಿಭಾಗಾಧಿಕಾರಿ ಶ್ರೀಮತಿ ಪ್ರಭಾವತಿ ಫಕೀರಪೂರ ಹೇಳಿದರು.
ಅವರು ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮನ ಸಮಾಧಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಿಗೆ ಗೌರವ ಸಮರ್ಪಿಸಿ, ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಅಧಿಕಾರ ಸ್ವೀಕರಿಸಿ, ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ವೀರರ ನಾಡಿನ ಮಣ್ಣಿನ ಪ್ರತಿಯೊಂದು ಕಣದಲ್ಲಿ ಆಗಾಧ ಶಕ್ತಿಯಿದ್ದು ಈ ನಾಡಿನಲ್ಲಿ ನನಗೆ ಸೇವೆ ಸಲ್ಲಿಸುವ ಸೌಭಾಗ್ಯ ಒದಗಿ ಬಂದಿರುವುದು ಸಂತಸ ತಂದಿದೆ ಎಂದರು. ವೀರರಾಣಿ ಬೆಳವಡಿ ಮಲ್ಲಮ್ಮ, ಅಮಟೂರ ಬಾಳಪ್ಪ, ಬೀಚ್ಚುಗತ್ತಿ ಚೆನ್ನಬಸಪ್ಪ, ವಡ್ಡರ ಯಲ್ಲಣ್ಣ ಇನ್ನೂ ಅನೇಕ ವೀರರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೆ ಬಲಿದಾನಗೈದಿದ್ದಾರೆ ಇವರ ಸ್ಮರಣೆ ಅಗತ್ಯ ಎಂದರು.
ಸಮಾಧಿ ರಸ್ತೆಯ ಎರಡು ಬದಿ ಪುಟಪಾತ ಮೇಲಿನ ಅತಿಕ್ರಮಣ, ಬಾಡಿಗೆ ರೂಪದ ವಾಹನ, ವಾಣೀಜ್ಯಾತ್ಮಕ ವಾಹನ, ಕುದುರೆ, ಹೊಟೆಲ ಖಾನಾವಳಿಗೆ ಆಗಮಿಸುವ ವಾಹನಗಳಿಗೆ ನಿಲುಗಡೆ, ಸಣ್ಣ ಪುಟ್ಟ ಅಂಗಡಿ, ಮೊಟ್ಟೆ, ಡಬ್ಬಾ ಅಂಗಡಿ, ದನಕುರುಗಳ ಹಟ್ಟಿಗಳನ್ನು, ಮದ್ಯಪಾನ, ಧೂಮಪಾನ, ಜೂಜಾಟ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಪೂರ್ಣವಾಗಿ ನಿರ್ಬಂದಿಸಲಾಗಿದೆ. ಅಲ್ಲದೇ ಸಮಾಧಿ ಮುಂಭಾಗದ ರಸ್ತೆಯಲ್ಲಿ ಯಾವದೇ ಬಹಿರಂಗ ಸಭೆ, ಸಾರ್ವಜನಿಕ ಮನರಂಜನೆ ಇನ್ನಿತರ ಕಾರ್ಯಕ್ರಮಗಳನ್ನು ಆಯೊಜನೆ ಮಾಡುವ ಇಚ್ಚಾಶಕ್ತಿ ಹೊಂದಿದ್ದರೆ ಪುರಸಭೆ, ಪೊಲೀಸ ಇಲಾಖೆ, ಕಿತ್ತೂರ ಅಭಿವೃದ್ದಿ ಪ್ರಾಧಿಕಾರ ಅನುಮತಿ ಪಡೆಯಬೇಕು. ಒಂದು ವೇಳೆ ಅನುಮತಿ ಪಡೆಯದೇ ಕಾರ್ಯಕ್ರಮ ಆಯೋಜನೆ ಮಾಡಿದರೆ ಅಂತವರ ವಿರುದ್ದ ಕಾನೂನು ಪ್ರಕಾರ ನಿರ್ದಾಕ್ಷಿಣವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಪಾರದರ್ಶಕವಾಗಿ ಯಾವುದೇ ಕುಂದು ಕೊರತೆ ನೋಡಿಕೊಳ್ಳುವದಾಗಿ ಭರವಸೆ ನೀಡಿದರು. ಅಲ್ಲದೇ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಟ್ರಾಪೀಕ ಸಮಸ್ಯೆ ಕುರಿತು ಪತ್ರಕರ್ತರು ಗಮನ ಸೆಳೆದಾಗ ಈ ಕುರಿತು ಪೊಲೀಸ ಇಲಾಖೆಯೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗುವುದು ಎಂದರಲ್ಲದೇ ಪಟ್ಟಣದ ಸ್ವಚ್ಚತೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ತಹಸೀಲ್ದಾರ ಬಸವರಾಜ ನಾಗರಾಳ ಇದ್ದರು.