Belagavi News In Kannada | News Belgaum

ಕಾರ್ಕಳದಿಂದ ಮುತಾಲಿಕ್ ಸ್ಪರ್ಧೆ; ಬಿಜೆಪಿ ಅಭ್ಯರ್ಥಿ ಹಾಕಬೇಡಿ ಎಂದ ಶ್ರೀರಾಮಸೇನೆ

ರಾಯಚೂರು: ಶ್ರೀರಾಮಸೇನೆಯಿಂದ ಪ್ರಮೋದ್ ಮುತಾಲಿಕ್ ಉಡುಪಿಯ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಅಂತಿಮವಾಗಿರುವುದರಿಂದ ಕಾರ್ಕಳ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹಾಕದಂತೆ ಶ್ರೀರಾಮಸೇನೆ ಬಿಜೆಪಿಗೆ ಒತ್ತಾಯ ಮಾಡಿದೆ.

ರಾಯಚೂರು ನಗರದ ಶ್ರೀರಾಮಸೇನೆ ಮುಖಂಡರು, ಕಾರ್ಯಕರ್ತರು ಬಿಜೆಪಿಗೆ ಒತ್ತಾಯ ಮಾಡಿದ್ದು, ಬಿಜೆಪಿ ಅಭ್ಯರ್ಥಿ ಹಾಕದೇ ಇದ್ದರೆ ಮುತಾಲಿಕ್‍ಗೆ ಗೆಲುವು ಖಚಿತ, ಹೀಗಾಗಿ ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಹಾಕಬಾರದು ಅಂತ ಒತ್ತಾಯಿಸಿದ್ದಾರೆ. ಇಂಧನ ಸಚಿವ ಸುನಿಲ್ ಕುಮಾರ್ ಕಾರ್ಕಳದ ಹಾಲಿ ಬಿಜೆಪಿ ಶಾಸಕರಾಗಿದ್ದಾರೆ. ಈ ಮಧ್ಯೆಯೂ ಬಿಜೆಪಿ ಅಭ್ಯರ್ಥಿ ಹಾಕದಂತೆ ಬಿಜೆಪಿ ಮುಖಂಡರಿಗೆ ಒತ್ತಾಯಿಸಿದ್ದಾರೆ.

ಕೋಟಿ ಕೋಟಿ ಖರ್ಚು ಮಾಡಿ ಚುನಾವಣೆ ಎದುರಿಸುವ ಸ್ಥಿತಿಯಲ್ಲಿ ಶ್ರೀರಾಮಸೇನೆ ಇಲ್ಲ. ಕಾರ್ಯಕರ್ತರೇ ಮುತಾಲಿಕ್ ಬೆನ್ನಿಗೆ ನಿಲ್ಲುವಂತೆ ಒತ್ತಾಯಿಸುತ್ತಿದ್ದಾರೆ. ಕಾರ್ಯಕರ್ತರೇ ಗೆಲ್ಲಿಸುತ್ತೇವೆ ಅಂತ ಕರೆ ನೀಡಿರುವ ಹಿನ್ನೆಲೆ ಕಾರ್ಕಳದಲ್ಲಿ ಮುತಾಲಿಕ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ. ಒಂದು ವೇಳೆ ಬಿಜೆಪಿ ಟಿಕೆಟ್ ಕೊಟ್ಟರೂ ಸ್ವಾಗತ, ಬಿಜೆಪಿ ಹಾಗೂ ಮುತಾಲಿಕ್ ಸಿದ್ಧಾಂತಗಳು ಒಂದೇ ಆಗಿವೆ. ಈ ಬಗ್ಗೆ ಬಿಜೆಪಿ ನಾಯಕರಿಗೆ ಒತ್ತಾಯಿಸಲಾಗುತ್ತಿದೆ ಅಂತ ಶ್ರೀರಾಮ ಸೇನೆ ಮುಖಂಡರು ಹೇಳಿದ್ದಾರೆ.