ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಶಿಕ್ಷಣ ಮಾತ್ರ ಸಿಗುತ್ತದೆ, ಆದರೆ ಗುರುಕುಲಗಳಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ

ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಶಿಕ್ಷಣ ಮಾತ್ರ ಸಿಗುತ್ತದೆ, ಆದರೆ ಗುರುಕುಲಗಳಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಗುತ್ತದೆ ಎಂದು ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ಹೇಳಿದರು.
ಶನಿವಾರ ಬೆಳಗಾವಿಯ ಹನುಮಾನ ನಗರದ ದೂರದರ್ಶನ ಕೇಂದ್ರ ಜೋಡುರಸ್ತೆಯ ಸಿದ್ಧಲಕ್ಷ್ಮೀ ಕಟ್ಟಡದಲ್ಲಿ ಏರ್ಪಡಿಸಲಾದ ಪ್ರಣವಮ್ ಫೌಂಡೇಶನ್‍ನ ಗುರುಕುಲದ ಪ್ರಥಮ ಮತ್ತು ಸ್ಟಡಿ ಕ್ಯಾಂಪಸ್‍ನ ನಾಲ್ಕನೇಯ ವಾರ್ಷಿಕ ಸ್ನೇಹ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಎಷ್ಟೇ ಆಸ್ತಿ ಇದ್ದರೂ ಹಿಂದಿನ ಕಾಲದಲ್ಲಿ ರಾಜ ಮಹಾರಾಜರ ಮಕ್ಕಳು ಸಾಮಾನ್ಯರಂತೆ ಗುರುಕುಲಗಳಲ್ಲಿ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಸಂಸ್ಕಾರ ಪಡೆದು ಸಮರ್ಥ ರಾಜ್ಯಭಾರ ನಡೆಸಿ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಗುರುಕುಲಗಳಲ್ಲಿ ಯೋಗ ಧ್ಯಾನ, ವ್ಯಾಯಾಮ, ಶ್ಲೋಕ-ಮಂತ್ರ ಪಠಣ, ವೇದಗಳ ಜ್ಞಾನ, ಶಸ್ತ್ರ ವಿದ್ಯೆಗಳನ್ನು ನೀಡಲಾಗುತ್ತಿತ್ತು. ಅದೇ ರೀತಿ ಪ್ರಣವಮ್ ಗುರುಕುಲದಲ್ಲೂ ಈ ಎಲ್ಲ ವಿದ್ಯೆಗಳನ್ನೂ ನೀಡÀಲಾಗುತ್ತಿದ್ದು ಶಸ್ತ್ರ ವಿದ್ಯೆಯ ಬದಲಾಗಿ ಆತ್ಮ ರಕ್ಷಣೆಗಾಗಿ ಕರಾಟೆ ಕಲಿಸಲಾಗುತ್ತದೆ ಎಂದರು.
ಪ್ರಣವಮ್ ಗುರುಕುಲದ ಸಂಸ್ಥಾಪಕ ಅಧ್ಯಕ್ಷ ನಿಶ್ಚಲಸ್ವರೂಪ ಮಹಾಸ್ವಾಮಿಗಳು ಮಾತನಾಡಿ, ಮಕ್ಕಳಿಗೆ ಹಸಿವಿನ ಅರಿವು ಮೂಡಿಸಿ, ಅವರಿಗೆ ಅನ್ನದ ಮಹತ್ವ ತಿಳಿಸಿ ಕೊಡಬೇಕು. ಪಾಲಕರು ಒತ್ತಾಯದ ಶಿಕ್ಷಣ ಕೊಡಿಸಲು ಪ್ರಯತ್ನಿಸದೇ ಮಕ್ಕಳನ್ನು ಅವರವರ ಆಯ್ಕೆಗೆ ತಕ್ಕಂತೆ ಅಭ್ಯಾಸ ಮಾಡಲು ಬಿಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ, ಬೆಂಗಳೂರು ನಗರ ಅಪರಾಧ ವಿಭಾಗದ ಜ್ಯೋತಿರ್ಲಿಂಗ ಹೊನಕಟ್ಟಿ, ಶಿಕ್ಷಕ ಮಹಾಂತಯ್ಯ ಪೂಜಾರ ಮಾತನಾಡಿದರು.
ಮಕ್ಕಳಿಂದ ಗಾಯನ, ನೃತ್ಯ, ಶ್ಲೋಕ ಪಠಣ, ಭಾಷಣ ಕಾರ್ಯಕ್ರಮಗಳು ನಡೆದವು. ವಿಜೇತ ಮಕ್ಕಳಿಗೆ ಶ್ರೀಗಳಿಂದ ಪ್ರಶಸ್ತಿಪತ್ರ ಮತ್ತು ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು.
ಗುರುಸಿದ್ಧ ಮಹಾಸ್ವಾಮಿಗಳು ಮತ್ತು ಹೊಸೂರಿನ ಗುರು ಮಡಿವಾಳೇಶ್ವರ ಮಠದ ಗಂಗಾಧರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ನಿಶ್ಚಲಸ್ವರೂಪ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಮಂಗಳಾ ಮೆಟಗುಟ್ಟ ಕಾರ್ಯಕ್ರಮ ಉದ್ಘಾಟಿಸಿದರು. ಲೇಕ್‍ವ್ಯೂ ಆಸ್ಪತ್ರೆಯ ವೈದ್ಯ ಡಾ ಗಿರೀಶ ಸೋನವಾಳಕರ, ಜ್ಯೋತಿಲಿರ್ಂಗ ಹೊನಕಟ್ಟಿ, ಮಹಾಂತೇಶ ಪೂಜಾರ, ಯಲ್ಲಪ್ಪ ಮೇಘೊಚೆ ಇತರರಿದ್ದರು.