Belagavi News In Kannada | News Belgaum

ಮೊದಲ ಬಾರಿ ಮನೆಗೆ ಬಂದ ಅಳಿಯನಿಗೆ 108 ಬಗೆಯ ಖಾದ್ಯ ತಯಾರಿಸಿದ ಅತ್ತೆ

ವಿಜಯವಾಡ: ಮಹಿಳೆಯೊಬ್ಬರು ತಮ್ಮ ಅಳಿಯನಿಗೆ 108 ಬಗೆಯ ಖಾದ್ಯಗಳನ್ನು ಮಾಡಿ ಉಣಬಡಿಸಿದ ಘಟನೆ  ನೆಲ್ಲೂರು ಜಿಲ್ಲೆಯ ಪೊದಲಕೂರು ಮಂಡಲದ ಉಚಪಲ್ಲಿ ಗ್ರಾಮದಲ್ಲಿ ನಡೆದಿದೆ.

 

108 ಬಗೆಯ ಖಾದ್ಯಗಳಲ್ಲಿ ವೆಜ್​ ಮತ್ತು ನಾನ್​ವೆಜ್​ ಎರಡೂ ಇದ್ದವು. ಶಿವಕುಮಾರ್​ ಮತ್ತು ಶ್ರೀದೇವಮ್ಮ ಎಂಬುವರು ಉಚಪಲ್ಲಿಯಲ್ಲಿ ವಾಸವಿದ್ದಾರೆ. ಶಿವಕುಮಾರ್​ ಅವರು ಕಂದಲೇರು ಪೊಲೀಸ್ ಠಾಣೆಯಲ್ಲಿ ಹೋಮ್​ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಮಗಳು ಶ್ರೀವಾಣಿಯನ್ನು ನೆಲ್ಲೂರಿನ ಬಿವಾನಗರದ ಶಿವಕುಮಾರ್​ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಅಳಿಯ ಮತ್ತು ಮಾವ ಇಬ್ಬರದೂ ಒಂದೇ ಹೆಸರು.
ಮಗಳನ್ನು ಇತ್ತೀಚೆಗಷ್ಟೇ ಮದುವೆ ಮಾಡಿಕೊಟ್ಟಿದ್ದು, ಮದುವೆಯ ಬಳಿಕ ಮೊದಲ ಬಾರಿಗೆ ಮನೆಗೆ ಬಂದ ಅಳಿಯನಿಗೆ 108 ಬಗೆಯ ಭಕ್ಷ್ಯ ಭೋಜನಗಳನ್ನು ತಯಾರಿಸಿ ಉಣಬಡಿಸಿದ್ದಾರೆ.

ಊಟದ ಮೆನುವಲ್ಲಿ ಏನೇನಿತ್ತು ಎಂದು ನೋಡುವುದಾದರೆ, ಮಟನ್​, ಚಿಕನ್​, ಮೀನು, ಸಿಗಡಿ, ರಸಂ, ಸಾಂಬಾರ್​ ಹಾಗೂ ಮೊಸರು ಜೊತೆಗೆ ವಿವಿಧ ಪೇಸ್ತ್ರಿ ಮತ್ತು ಸಿಹಿತಿಂಡಿಗಳು ಇದ್ದವು. ಎಲ್ಲ ರೀತಿಯ ಭಕ್ಷ್ಯವನ್ನು ಒಂದೇ ಟೇಬಲ್​ನಲ್ಲಿ ಇಟ್ಟು ಅಳಿಯನಿಗೆ ಬಡಿಸಲಾಯಿತು. ಊಟದ ವೇಳೆ ಮೊಬೈಲ್​ನಲ್ಲಿ ಸೆರೆಹಿಡಿಯಲಾದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​​ ಆಗುತ್ತಿದೆ. ಇಂಥಾ ಅತ್ತೆ-ಮಾವನನ್ನು ಪಡೆದ ನೀನೇ ಪುಣ್ಯವಂತ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.