Belagavi News In Kannada | News Belgaum

ಗ್ರಾಮಸ್ಥರು ಆಚರಿಸುತ್ತಿರುವ ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಸರಕಾರಿ ಉತ್ಸವವನ್ನಾಗಿಸಲು ಸರಕಾರದ ಮೇಲೆ ಒತ್ತಡ ಹೇರಲಾಗುವದು ಎಂದು ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಹೇಳಿದರು

ಬೈಲಹೊಂಗಲ-ಗ್ರಾಮಸ್ಥರು ಆಚರಿಸುತ್ತಿರುವ ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಸರಕಾರಿ ಉತ್ಸವವನ್ನಾಗಿಸಲು ಸರಕಾರದ ಮೇಲೆ ಒತ್ತಡ ಹೇರಲಾಗುವದು ಎಂದು ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಹೇಳಿದರು.

ಅವರು ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಗ್ರಾಮದ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಒಕ್ಕುಂದ ಗ್ರಾಮಕ್ಕೆ ರಾಷ್ಟ್ರಕೂಟರ ಆಳ್ವಿಕೆಯ 8 ನೇ ಶತಮಾನದ ಕವಿರಾಜ ಮಾರ್ಗ ಗೃಂಥದಲ್ಲಿ ಒಕ್ಕುಂದ ಉಲ್ಲೇಖವಿದ್ದು, 12 ನೇ ಶತಮಾನದ ಸವದತ್ತಿ ರಟ್ಟರ ಕಾಲದಲ್ಲಿ ಐತಿಹಾಸಿಕ ತ್ರಿಕೂಟೇಶ್ವರ ದೇವಾಲಯ ನಿರ್ಮಾಣವಾಗಿದ್ದು, ಅಂದು ಅದು ಜೈನ ಬಸೀದಿಯಾಗಿತ್ತು ಇಲ್ಲಿನ ಸಾವಿರಾರು ವರ್ಷಗಳಷ್ಟು ಹಳೆಯದಾದ ಇತಿಹಾಸವನ್ನು ಇಂದಿನ ಪೀಳಿಗೆ ತಿಳಿಸಲು ಉತ್ಸವ ಆಯೋಜಿಸುತ್ತಿರುವ ಗ್ರಾಮಸ್ಥರ ಕಾರ್ಯ ಶ್ಲಾಘನೀಯ. ಇಲ್ಲಿನ ಶಿಲ್ಪ ಮಂದಿರ ಕಲಗುಡಿ ಪ್ರಸಿದ್ಧ ಪ್ರವಾಸಿ ತಾಣ ಮಾಡಲು ಶ್ರಮಿಸುವುದಾಗಿ ಹೇಳಿದರು.

ಉಪನ್ಯಾಸಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಮಾತನಾಡಿ, ತಿರುಳ್ಗನ್ನಡನಾಡು ಎಂದರೆ ತುಂಬಾ ಸ್ಪಷ್ಟವಾದ, ಗಟ್ಟಿಯಾದ ತೀವ್ರತರವಾದ, ಅಪಬ್ರಮ್ಶು ಇಲ್ಲದಿರುವ ಕನ್ನಡ ಎಂದರ್ಥ 9 ನೇ ಶತಮಾನದಲ್ಲಿ ಬಹುತೇಕ ಒಕ್ಕುಂದ ಗ್ರಾಮವು ಒಂದು ಮೆಟ್ರೋಪಾಲಿಟಿನ್ ಪ್ರದೇಶವಾಗಿತ್ತು. ಎಲ್ಲ ವಸಾಹುತಶಾಹಿಗಳಿಗೆ ವಾಣಿಜ್ಯ ಕೇಂದ್ರವಾಗಿತ್ತು. ಭಾಷಿಕ ಆಯಾಮದ ಜತೆಗೆ ಗಡಿ ವಿವಾದ ಕೆದಕುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಗಟ್ಟಿಯಾಗಿ ಬೆಳಗಾವಿ ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಶ್ರೀವಿಜಯನ ಕವಿರಾಜಮಾರ್ಗ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಕಲ್ಯಾಣ ಕ್ರಾಂತಿಗೂ ಈ ನಾಡಿಗೂ ಅವಿನಾಭಾವ ಸಂಬಂದ ಹೊಂದಿದೆ. ಬಸವಾದಿ ಶರಣರು ನಡೆದುಕೊಂಡು ಉಳಿವಿಗೆ ಹೋಗಿರುವ ನಾಡು ಇದು. ಒಕ್ಕುಂದ ಪ್ರತಿನಿಧಿಸುವ ಪ್ರತಿಯೊಬ್ಬರಿಗೂ ತಮ್ಮೂರಿನ ಅಭಿಮಾನ ಹೊಂದಿರಬೇಕು ಎಂದರು.
ಅತಿಥಿಯಾಗಿ ಆಗಮಿಸಿದ್ದ ಬಿ. ಬಿ. ಗಣಾಚಾರಿ ಮಾತನಾಡಿ, ಕಲಗುಡಿ ಜೀರ್ಣೋದ್ಧಾರಕ್ಕೆ ಪುರಾತತ್ವ ಇಲಾಖೆಯಿಂದ ಅನುದಾನ ಬಿಡುಗಡೆ ಆಗುವುದಿದೆ ಎನ್ನುವುದು ಬೇಡ. ಇಷ್ಟು ದಿನ ನಿರ್ಲಕ್ಷ್ಯ ಮಾಡಿದ್ದು ಸಾಕು, ಇನ್ಮುಂದೆಯಾದರೂ ಇತ್ತ ಗಮನಹರಿಸಿ, ತಕ್ಷಣವೇ ಒಕ್ಕುಂದ ಗ್ರಾಮವನ್ನು ಪ್ರಸಿದ್ಧ ಪ್ರವಾಸಿತಾಣ ಮಾಡುವಂತೆ ಆಗ್ರಹಿಸಿದರು.
ವಕ್ಕುಂದ ಶ್ರೀ ರಾಚೋಟಿ ಸ್ವಾಮೀಜಿ, ನಯಾನಗರದ ಅಭಿನವ ಸಿದ್ಧಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಗ್ರಾಪಂ. ಅಧ್ಯಕ್ಷೆ ಸವಿತಾ ಹೂವಿನ ಅಧ್ಯಕ್ಷತೆ ವಹಿಸಿದ್ದರು. ಜಿಪಂ. ಮಾಜಿ ಸದಸ್ಯ ಶಂಕರ ಮಾಡಲಗಿ, ಅಬಕಾರಿ ಪಿಎಸ್ಐ ನಾಗರಾಜ ಕೋಟಗಿ, ಉತ್ಸವ ಸಮಿತಿ ಗೌರವ ಅಧ್ಯಕ್ಷ ಸಿ.ಕೆ.ಮೆಕ್ಕೇದ, ನಿವೃತ್ತ ಉಪತಹಶೀಲ್ದಾರ ಎಸ್.ಆರ್.ಕಮ್ಮಾರ ಮಾತನಾಡಿದರು. ಸಿ.ಪಿ.ಐ. ಮಹಾಂತೇಶ ಹೊಳಿ, ಗ್ರಾ.ಪಂ. ಉಪಾಧ್ಯಕ್ಷ ಸುಭಾಷ ಮೆಕ್ಕೇದ, ಅಶೋಕ ಜಂತಿ, ಉಪಾಧ್ಯಕ್ಷ ಶಂಕರ ಕೋಟಗಿ, ಅಶೋಕ ಭದ್ರಶೆಟ್ಟಿ, ಪರ್ವತಗೌಡ ಪಾಟೀಲ, ರಾಮನಗೌಡ ಪಾಟೀಲ, ಸಂಗಣ್ಣ ಭದ್ರಶೆಟ್ಟಿ, ಜಿ. ಎಮ್. ಸುತಗಟ್ಟಿ, ಮಡಿವಾಳಪ್ಪ ತಡಸಲ್, ಕಾಶಪ್ಪ ಭದ್ರಶೆಟ್ಟಿ ಹಾಗೂ ಗ್ರಾಮಸ್ಥರು ಇದ್ದರು.
ಉತ್ಸವ ಸಮಿತಿ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಸಿ. ಬಿ. ಗಣಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಜಿ. ಸಿ. ಪಾಟೀಲ ನಿರೂಪಿಸಿದರು. ಅಧ್ಯಕ್ಷ ಬಸನಗೌಡ ಪೆÇಲೀಸ್ ಪಾಟೀಲ ಸ್ವಾಗತಿಸಿದರು. ಸಿದ್ದನಗೌಡ ಪಾಟೀಲ ವಂದಿಸಿದರು. ಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ಜನಮನ ಸೆಳೆದವು.