ಸವದತ್ತಿ ಯಲ್ಲಮ್ಮ ಸನ್ನಿಧಾನದಲ್ಲಿಯೇ ಅಕ್ರಮವಾಗಿ ಮದ್ಯ ಮಾರಾಟ

ಬೆಳಗಾವಿ: ಪ್ರತಿವರ್ಷದಂತೆ ಈ ಬಾರಿಯೂ ಉತ್ತರ ಕರ್ನಾಟಕದ ಸುಪ್ರಸಿದ್ಧ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ ಅದ್ದೂರಿಯಾಗಿ ನಡೆಸಲಾಗುತ್ತಿದೆ. ಇಂತಹ ಯಲ್ಲಮ್ಮನ ಸನ್ನಿಧಾನದಲ್ಲಿ ಅಕ್ರಮವಾಗಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.
ಹೌದು…. ಫೆಬ್ರವರಿಯಲ್ಲಿ ಬರುವ ಭಾರತ ಹುಣ್ಣುಮೆಗೆ ಕರ್ನಾಟಕದ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಭಂಡಾರದೊಡತಿ ದರ್ಶನಕ್ಕೆ ಆಗಮಿಸುತ್ತಾರೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಹೊರ ರಾಜ್ಯದಿಂದಲೂ ಅಪಾರ ಪ್ರಮಾಣದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಭಾರತ ಹುಣ್ಣುಮೆ ದಿನದಂದೂಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಇಂಥಹ ದೇವಿ ಸನ್ನಿಧಾನದಲ್ಲಿಅಕ್ರಮವಾಗಿ ಮದ್ಯ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಸುಮಾರು ನೂರು ಎಕರೆ ಪ್ರದೇಶದಲ್ಲಿ ಅದ್ದೂರಿ ಜಾತ್ರೆ ನಡೆಯುತ್ತಿದ್ದು ಸುಮಾರು ಅರವತ್ತಕ್ಕೂ ಅಧಿಕ ಕೋಲ್ಡ್ರಿಂಕ್ಸ್ ಶಾಪ್ ಗಳು ಜಾತ್ರೆಯಲ್ಲಿ ತೆರೆದಿರುತ್ತಾರೆ. ದೇವಿಯ ಸನ್ನಿಧಾನದಲ್ಲಿದ್ದುಕೊಂಡೇ ಕೆಲವರು ಭಕ್ತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯಲ್ಲಮ್ಮನ ಗುಡ್ಡದಲ್ಲಿರುವ ಪ್ರತಿಯೊಂದು ಕೋಲ್ಡ್ರಿಂಕ್ಸ್ ಶಾಪ್ ನಲ್ಲಿ ಇದೀಗ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಕೆಲವು ಅಂಗಡಿಗಳಂತೂ ಒಳಗಡೆ ಭಾಗದಲ್ಲಿ ಬಾರ್ ಮಾದರಿಯಲ್ಲೇ ರೆಡಿ ಮಾಡಿ ಅಲ್ಲೇ ಕುಡಿಯುವ ವ್ಯವಸ್ಥೆ ಮಾಡಿದ್ದಾರೆ.
ಮಕ್ಕಳಿಂದಲೂ ಮದ್ಯ ಮಾರಾಟ: ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಒಂದು ಕಡೆ ಅದ್ದೂರಿಯಾಗಿ ಜಾತ್ರೆ ನಡೆಯುತ್ತಿದ್ರೇ ಇನ್ನೊಂದು ಕಡೆ ಜಾತ್ರೆಯಲ್ಲೇ ಮೂಲೆ ಮೂಲೆಯಲ್ಲಿ ಮದ್ಯ ಮಾರಾಟವಾಗುತ್ತಿದೆ. ಇದರಲ್ಲಿ ಚಿಕ್ಕ ಮಕ್ಕಳು ಕೂಡ ಟೆಟ್ರಾ ಪಾಕೆಟ್ ಗಳನ್ನ ಹಣ ಪಡೆದು ಮಾರಾಟ ಮಾಡುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ. ಮಹಿಳೆಯರು ಕೂಡ ಈ ಅಕ್ರಮ ಸಾರಾಯಿ ಮಾರಾಟ ಮಾಡುವ ದಂಧೆ ರಾಜಾರೋಷವಾಗಿ ಮಾಡುತ್ತಿದ್ದಾರೆ. ದೇವಿಯ ಭಂಡಾರ ಸಿಗಬೇಕಿದ್ದ ಜಾಗದಲ್ಲಿ ಇದೀಗ ಎಣ್ಣೆ ಸಿಗುತ್ತಿದ್ದು ಜಿಲ್ಲಾಡಳಿತವೇ ಇದಕ್ಕೆ ನೇರ ಹೊಣೆ ಅಂತಾ ಕೆಲ ಭಕ್ತರು, ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.