ಬಸ್‍ನಲ್ಲಿ ಗಾಳಿನೇ ಇಲ್ಲ ಎಂದ ಎಂ.ಬಿ. ಪಾಟೀಲ್

ಕಲಬುರಗಿ: ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಕೈಗೊಂಡಿರುವ ಪ್ರಜಾಧ್ವನಿ ಬಸ್ ಪಂಚರ್ ಆಗಿದೆ ಎಂದು ಮಾಜಿ ಸಿಎಂ ಬಿಎಸ್‍ವೈ ಹೇಳಿಕೆ ನೀಡಿದ ಬೆನ್ನಲ್ಲೇ ಭಾನುವಾರ ಕಲಬುರಗಿಯಲ್ಲಿ ಮಾಜಿ ಸಚಿವ ಎಂಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ನಮ್ಮ ಬಸ್ ಎಂದಿಗೂ ಪಂಕ್ಚರ್ ಆಗುವುದಿಲ್ಲ. ಬಿಜೆಪಿಯವರು ಯಡಿಯೂರಪ್ಪ ಅವರನ್ನ ಪಂಕ್ಚರ್ ಮಾಡಿದ್ದಾರೆ. ಬಿಜೆಪಿ ಬಸ್‍ಗೆ ಟೈರಲ್ಲಿ ಗಾಳಿನೇ ಇಲ್ಲ, ಅದಕ್ಕಾಗಿ ಪದೇ ಪದೇ ಮೋದಿಯವರನ್ನ ಕರೆಸುತ್ತಿದ್ದಾರೆ. ರಾಜ್ಯದಲ್ಲಿ ಮೋದಿ/ಶಾ ಅವರ ಮೋಡಿ ನಡೆಯುವುದಿಲ್ಲ. ಈ ಬಾರಿ ನಡೆಯಲ್ಲ ಎಂದು ಹೇಳಿದರು.
ಇದಲ್ಲದೇ 7 ರಿಂದ 8 ಬಿಜೆಪಿ ಹಾಲಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ ಎಂ.ಬಿ ಪಾಟೀಲ್, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಶಾಸಕಾಂಗ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಸಿಎಂ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ನಮ್ಮಲ್ಲಿ ಬೇಧ-ಭಾವ ಇಲ್ಲ. ಬಹಳಷ್ಟು ಜನ ಸಮರ್ಥರಿದ್ದಾರೆ ಎಂದು ಅವರು ಹೇಳಿದರು.
ಪ್ರಜಾಧ್ವನಿ ಯಾತ್ರೆಗಾಗಿ ಎರಡು ತಂಡಗಳನ್ನಾಗಿ ರಚನೆ ಮಾಡಲಾಗಿದೆ. ಯಾತ್ರೆಗೆ ರಾಜ್ಯದ ವಿವಿಧೆಡೆ ಜನ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯ ಕುರಿತು ಹಾಗೂ ಪ್ರಧಾನಿ ನರೇಂದ್ರ ಮೋದಿ ಆಡಳಿತ ಹೇಗಿದೆ ಅನ್ನೋದು ಜನರಿಗೆ ಗೋತ್ತಾಗಿದೆ. ಪ್ರಜಾಧ್ವನಿ ಬಸ್ ಯಾತ್ರೆ ಯಶಸ್ವಿಯಾಗಿ ಸಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.