ಲೋಕಾಯುಕ್ತ ಬಲೆಗೆ ಬಿದ್ದ ಕಾನೂನು ಮಾಪನ ಇಲಾಖೆ ಸಹಾಯಕ ನಿಯಂತ್ರಕಿ

ಚಿಕ್ಕಬಳ್ಳಾಪುರ: ಪೆಟ್ರೋಲ್ ಬಂಕ್ ಮಾಲೀಕರಿಂದ 8 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು ಮಂಗಳವಾರ ಹಣ ಪಡೆಯುತ್ತಿರುವಾಗ ಕಾನೂನು ಮಾಪನ ಇಲಾಖೆಯ ಸಹಾಯಕ ನಿಯಂತ್ರಕಿ ಎಸ್.ಮಾಲಾ ಕಿರಣ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪ್ರತಿ ವರ್ಷ ಕಾನೂನು ಮಾಪನ ಇಲಾಖೆಯ ಅಧಿಕಾರಿಗಳು ಪೆಟ್ರೋಲ್ ಬಂಕ್ ತಪಾಸಣೆ ಮಾಡಿ ಪ್ರಮಾಣ ಪತ್ರ ನೀಡುವರು. ಆ ಪ್ರಕಾರ ಶಿಡ್ಲಘಟ್ಟ ರಸ್ತೆಯ ಬಸವೇಶ್ವರ ಪೆಟ್ರೋಲ್ ಬಂಕ್ ಮಾಲೀಕ ಭಾಸ್ಕರ್ ಅವರು ಬಂಕ್ ತಪಾಸಣೆ ಮಾಡಿ ಸ್ಟಾಂಪಿಂಗ್ ಮಾಡುವಂತೆ ಜ.31ರಂದು ಕಾನೂನು ಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.
ಫೆ.6ರಂದು ಮಾಲಾ ಕಿರಣ್ ಪೆಟ್ರೋಲ್ ಬಂಕ್‌ಗೆ ಬಂದು ತಪಾಸಣೆ ಮಾಡಿ ಸ್ಟಾಂಪಿಂಗ್ ಮಾಡಿದ್ದರು. ಪೆಟ್ರೋಲ್ ಬಂಕ್‌ನಲ್ಲಿ ಎರಡು ಪಂಪ್ ಇದ್ದು ಇದಕ್ಕೆ ನಾಲ್ಕು ನಾಜಲ್ ಇವೆ. ಪ್ರತಿ ನಾಜಲ್‌ಗೆ 2 ಸಾವಿರಂತೆ 8 ಸಾವಿರ ಲಂಚಕ್ಕೆ ಅಧಿಕಾರಿ ಬೇಡಿಕೆ ಇಟ್ಟಿದ್ದರು. ಎಪಿಎಂಸಿ ಆವರಣದಲ್ಲಿರುವ ಕಾನೂನು ಮಾಪನ ಇಲಾಖೆ ಕಚೇರಿಯಲ್ಲಿಯೇ ಮಾಲಾ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಪವನ್ ನೆಜ್ಜೂರ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಸಲೀಂ ಸಿ.ನದಾಫ್, ಸಿಬ್ಬಂದಿ ವೀರೇಗೌಡ, ಸಂತೋಷ್, ಲಿಂಗರಾಜು, ಗುರುಮೂರ್ತಿ, ಜಯಮ್ಮ, ಮಂಜುಳಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.