ವಾಲ್ಮೀಕಿ ಶ್ರೀಗಳ ಹೋರಾಟದ ಫಲದಿಂದ ಎಸ್ಸಿ-ಎಸ್ಟಿ ಸಮಾಜಕ್ಕೆ ಮೀಸಲಾತಿ ದೊರೆತಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ನ್ಯಾಯಕ್ಕಾಗಿ, ಸಮಾಜಕ್ಕಾಗಿ ಹೋರಾಟ ನಡೆಸುತ್ತಿರುವ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಶ್ರೀಗಳಿಗೆ ಬೆಂಬಲ ನೀಡಲು ಕರೆ

ದಾವಣಗೆರೆ: ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಶ್ರೀಗಳ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಘೋಷಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿಸಿದ್ದ 2023ನೇ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಹಾಗೂ ಜನಜಾಗೃತಿ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್ಸಿ, ಎಸ್ಟಿ ಸಮುದಾಯಕ್ಕೆ ಪ್ರಸನ್ನಾನಂದ ಶ್ರೀಗಳ ಹೋರಾಟದ ಫಲವಾಗಿ ಮೀಸಲಾತಿ ಸಿಕ್ಕಿದ್ದು ಇದೊಂದು ಇತಿಹಾಸ ಎಂದರು.
ವಾಲ್ಮೀಕಿ ಸಮಾಜವೂ ಶೈಕ್ಷಣಿಕ, ಆರ್ಥಿಕವಾಗಿ ಪ್ರಗತಿ ಹೊಂದಬೇಕು. ಅಂದಾಗ ಮಾತ್ರ ಪ್ರಸನ್ನಾನಂದ ಶ್ರೀಗಳ ಹೋರಾಟಕ್ಕೆ ಬೆಲೆ ಸಿಗುತ್ತದೆ. ವಾಲ್ಮೀಕಿ ಮಠಕ್ಕೆ ಎಲ್ಲಾ ಸರ್ಕಾರಗಳು ಸಹಾಯ, ಸಹಕಾರ ನೀಡಿವೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಅವಧಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಮುಂದೆಯೂ ನಾವು ಸಮಾಜದ ಅಭಿವೃದ್ದಿಗೆ ಬದ್ಧವಾಗಿದ್ದೇವೆ ಎಂದು ತಿಳಿಸಿದರು.
ಇವತ್ತು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ನಡೆಯಬೇಕು. ಸಮಾಜದಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿವೆ. ಇಂತಹ ಬೆಳವಣಿಗೆಗಳನ್ನು ತಡೆಗಟ್ಟಬೇಕು. ನ್ಯಾಯಕ್ಕಾಗಿ, ಸಮಾಜಕ್ಕಾಗಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಶ್ರೀಗಳು ಹೋರಾಟ ಮಾಡಿದರೆ ಅದಕ್ಕೆ ಬೆಂಬಲ ನೀಡಬೇಕೆಂದು ಕರೆ ನೀಡಿದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮಾತನಾಡಿ, ವಾಲ್ಮೀಕಿ ವಿಜಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಹಾಗೂ ಜನಜಾಗೃತಿ ಜಾತ್ರಾ ಮಹೋತ್ಸವದ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಮಠದ ಸ್ವಾಮೀಜಿಗಳು, ಶಾಸಕರು, ಮಾಜಿ ಶಾಸಕರು, ರಾಜ್ಯದ ಹಲವು ಪ್ರಮುಖ ಮುಖಂಡರು ಇದ್ದರು.///