Belagavi News In Kannada | News Belgaum

ಗ್ರಾಮೀಣ ಕ್ರೀಡೆ ಉಳಿಸಿ-ಬೆಳೆಸಿ:ಯುವ ನಾಯಕ ರಾಹುಲ್ ಜಾರಕಿಹೊಳಿ

ಬೆಳಗಾವಿ: ಗ್ರಾಮೀಣ ಭಾಗದ ಕ್ರೀಡೆಗಳು ನಶಿಸಿಹೋಗುತ್ತಿರುವ ಈ ದಿನಗಳಲ್ಲಿ ಜೋಡಿ ಎತ್ತಿನ ಗಾಡಿ ಸ್ಪರ್ಧೆ ಏರ್ಪಡಿಸಿರುವುದು ಸಂತೋಷದ ವಿಚಾರ. ಸ್ಪರ್ಧೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮೀಣ ಕ್ರೀಡೆಗಳ ಬಗ್ಗೆ ಇಂದಿನ ಯುವಕರು ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ತಿಳಿಸಿದರು.

ಯಮಕನಮರಡಿ ಮತಕ್ಷೇತ್ರದ ಕಡೋಲಿ ಗ್ರಾಮದಲ್ಲಿ ಸ್ವಾಭಿಮಾನಿ ರೈತರ ಯುವ ಸಂಘಟನೆ ವತಿಯಿಂದ ಆಯೋಜಿಸಲಾದ ಎರಡು ದಿನಗಳ ಜೋಡು ಎತ್ತಿನ ಸ್ಪರ್ಧೆಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವುದರ ಜತೆ ಕ್ಷೇತ್ರದ ಅಭಿವೃದ್ಧಿ, ಸಮಾಜ ಸೇವೆಗಾಗಿ ಶಾಸಕ ಸತೀಶ ಜಾರಕಿಹೊಳಿ ಅವರು ಜೀವನವೇ ಮುಡಿಪಾಗಿಟ್ಟಿದ್ದಾರೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.

ತಂದೆಯವರ ಮಾರ್ಗದರ್ಶನದಲ್ಲಿ ಇನ್ನಷ್ಟೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ಕ್ಷೇತ್ರ ಸಮಸ್ಯೆಯೊಂದಿಗೆ .. ನೊಂದವರ ಬದುಕಿಗೆ ಪರಿಹಾರ ನೀಡುವ ಕೆಲಸವನ್ನು ಸತೀಶ ಜಾರಕಿಹೊಳಿಯವರ ಫೌಂಡೇಶನ್ ದಿಂದ ನಿರಂತರ ಕಾರ್ಯ ನಡೆದಿದೆ ಎಂದರು.

ಜೋಡಿ ಎತ್ತಿನ ಗಾಡಿ ಓಟದ ರಂಗು: ಕಡೋಲಿ ಗ್ರಾಮದಲ್ಲಿ ಶನಿವಾರ ನಡೆದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ 50 ಜೋಡಿ ಎತ್ತಿನಗಾಡಿ ಸ್ಪರ್ಧಿಸಿ ಜನಮನ ರಂಜಿಸಿತು. ಎತ್ತಿನ ಗಾಡಿ ಓಟಕ್ಕೆ ಸಿದ್ಧಪಡಿಸಿದ್ದ ಮೈದಾನದಲ್ಲಿ ನಾನಾ ಕಡೆಯಿಂದ ಸ್ಪರ್ಧೆಗೆ ಆಗಮಿಸಿದ್ದ ಎತ್ತುಗಳ ಸವಾರರು ಗೆಲುವಿಗಾಗಿ ಸೆಣೆಸಾಡಿದರು. ಎತ್ತಿನಗಾಡಿಗಳನ್ನು ಓಡಿಸಲು ಸವಾರರು ಒಂದು ಕೈಯಲ್ಲಿ ಬಾರು ಕೋಲಿನಿಂದ ಎತ್ತುಗಳಿಗೆ ಪಟ, ಪಟನೆ ಬಾರಿಸುತ್ತಿದ್ದರು. ಕೆಲವರು ಸಮವಾಗಿ ಎರಡು ಎತ್ತುಗಳ ಹಗ್ಗ ಹಿಡಿದು ಸನ್ನೆ ಬಾಯಿ ಶಬ್ದದಿಂದ ನಾಗಲೋಟದಲ್ಲಿ ಎತ್ತುಗಳನ್ನು ಓಡಿಸುತ್ತಿದ್ದರು. ಇನ್ನು ಕೆಲವರು ಎತ್ತುಗಳ ಬಾಲಕ್ಕೆ ಕೈ ಹಾಕಿ ಎತ್ತುಗಳನ್ನು ಕೆರಳಿಸಿ ಓಡುವಂತೆ ಮಾಡುತ್ತಿದ್ದರು. ಪ್ರೇಕ್ಷ ಕರು ಚಪ್ಪಾಳೆ, ಸಿಳ್ಳೆ ಹಾಕಿ ಪ್ರೋತ್ಸಾಹ ನೀಡುತ್ತಿದ್ದರು. ಈ ಮಧ್ಯೆ ಕೆಲವು ಎತ್ತುಗಳು ಸವಾರರು ಹಗ್ಗ ಹಿಡಿದಿದ್ದರೂ ಮೈದಾನದಿಂದ ಹೊರ ಬರುತ್ತಿದ್ದ ದೃಶ್ಯ ರೋಚಕವಾಗಿತ್ತು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಮಲಗೌಡ ಪಾಟೀಲ, ಮಾಜಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಅನು ಕಟಾಂಬಳೆ , ರಾಮಾ ಜೋಳಿ, ಪ್ರದೀಪ ಎಂ ಜೆ, ಸಿದ್ದು ಸುನಗಾರ,ಸಾಗರ ಪಿಂಗಟ, ಆನಂದ ಪಾಟೀಲ್, ಸಾಗರ ಪಾಟೀಲ್, ಬಸವಂತ ಮಾಯಾಚಾನೆ, ವಿಜಯ ಪೌವಷೆ, ರೇಖಾ ಸುತಾರ, ರೇಖಾ ನರೊಟ್ಟಿ, ಹಾಗೂ ಸದಸ್ಯರು ಸೇರಿದಂತೆ ಗ್ರಾಮಸ್ಥರು ಹಾಗೂ ಕ್ರೀಡಾಸಕ್ತರು ಭಾಗವಹಿಸಿದ್ದರು.