Belagavi News In Kannada | News Belgaum

ಗೋಕಾಕ ವ್ಯಾಪಾರಿ ಕೊಲೆ ಪ್ರಕರಣ: ಇಬ್ಬರು ವೈದ್ಯರ ಬಂಧನ.

ಬೆಳಗಾವಿ: ನಗರದಲ್ಲಿ ಈಚೆಗೆ ನಡೆದ ವ್ಯಾಪಾರಿಯೊಬ್ಬರ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಕರಣ ಬೇಧಿಸಿರುವ ಪೊಲೀಸರು ಮಂಗಳವಾರ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ. ವ್ಯಾಪಾರಿಯನ್ನು ಕೊಲೆ ಮಾಡಲಾಗಿದೆ ಎಂಬುದನ್ನೂ ಖಚಿತಪಡಿಸಿದ್ದಾರೆ.

ನಗರದ ತಜ್ಞ ವೈದ್ಯ ಸಚಿನ್ ಶಂಕರ ಶಿರಗಾಂವಿ ಮತ್ತು ಹುಕ್ಕೇರಿ ತಾಲ್ಲೂಕಿನ ಶಿರಡ್ಯಾಣದ ಆಯುರ್ವೇದ ವೈದ್ಯ ಶಿವಾನಂದ ಕಾಡಗೌಡ ಪಾಟೀಲ ಬಂಧಿತರು. ನಗರದ ಹಿಲ್‌ ಗಾರ್ಡನ್‌ನ ನಿವಾಸಿ,    ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರ ಮಾಡಿಕೊಂಡಿದ್ದ ರಾಜು ಝಂವರ (53) ಕೊಲೆಯಾದವರು.
ಇಬ್ಬರೂ ಆರೋಪಿಗಳನ್ನು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆ ವಿವರ: ರಾಜು ಝಂವರ ಅವರು    ಫೆ.10ರಂದು ಕಾಣೆಯಾಗಿದ್ದರು. ಮಾರನೇ ದಿನ ಅವರ ಪತ್ನಿ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ನೇರವಾಗಿ ಸಿಕ್ಕಿದ್ದು ಇಬ್ಬರೂ ವೈದ್ಯರು.
ಡಾ.ಸಚಿನ್‌ ಅವರು ರಾಜು ಅವರಿಂದ ದೊಡ್ಡ ಮೊತ್ತದ ಸಾಲ ಪಡೆದಿದ್ದರು. ಈ ಹಣ ವಾಪಸ್‌ ನೀಡುವಂತೆ ರಾಜು ಪದೇಪದೇ ಕೇಳುತ್ತಿದ್ದರು.     ಅದನ್ನು ತಾಳಿಕೊಳ್ಳದೇ ಡಾ.ಸಚಿನ್‌ ಅವರು ತಮ್ಮ ಸ್ನೇಹಿತ ಡಾ.ಶಿವಾನಂದ ಜತೆ ಸೇರಿಕೊಂಡು ಕೊಲೆ ಮಾಡುವ ಸಂಚು ರೂಪಿಸಿದ್ದರು. ಕಳೆದ ಶುಕ್ರವಾರ ಸಂಜೆ ಅವರನ್ನು ಮಾರಕಾಸ್ತ್ರದಿಂದ ಕೊಲೆ ಮಾಡಿ, ಶವವನ್ನು ನಾಲೆಯಲ್ಲಿ ಎಸೆದ ಬಗ್ಗೆ ಸುಳಿವು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಜು ಅವರ ರಕ್ತದ ಕಲೆಗಳನ್ನೂ ಸಂಗ್ರಹಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.
ಗೋಕಾಕ ಸಿಪಿಐ ಪ್ರಕಾಶ ಯತನೂರ ಮತ್ತು ಸಬ್‌ಇನ್‌ಸ್ಪೆಕ್ಟರ್ ಎಂ.ಡಿ.ಘೋರಿ ನೇತೃತ್ವದ ಎರಡು ತಂಡ ಮಾಡಿ, ರಾಜು ಅವರ ದೇಹಕ್ಕಾಗಿ ಹುಡುಕಾಟ ಮುಂದುವರಿಸಲಾಗಿದೆ.