Belagavi News In Kannada | News Belgaum

ಡಾ.ಬಿ.ಆರ್‌. ಅಂಬೇಡ್ಕರ್ ಅವರಿಗೆ ಅವಮಾನ: ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ  ಒತ್ತಾಯ


ಬೆಳಗಾವಿ: ಬೆಂಗಳೂರಿನ ಜಯನಗರದಲ್ಲಿರುವ ಜೈನ್ ಕಾಲೇಜಿನಲ್ಲಿ ನಡೆದ ಯೂತ್ ಫೆಸ್ಟ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಲಾಗಿದ್ದು, ಕಾಲೇಜ ಹಾಗೂ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ವಿವಿಧ ದಲಿತ ಸಂಘಟನೆಗಳಿಂದ ಒತ್ತಾಯಿಸಿ ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಇದಕ್ಕೂ ಮೊದಲು ಇಲ್ಲಿನ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ವಿವಿಧ ದಲಿತ ಸಂಘಟನೆಗಳು ಜೈನ್ ಕಾಲೇಜು ಹಾಗೂ ವಿದ್ಯಾರ್ಥಿಗಳ ವಿರುದ್ದ ಆಕ್ರೋಶ ಹೊರಹಾಕಿದರು.

ಈ ವೇಳೆ ಕರ್ನಾಟಕ ವಾಲ್ಮೀಕಿ ಯುವವೇದಿಕೆ ರಾಜಾಧ್ಯಕ್ಷ ವಿಜಯ ತಳವಾರ ಮಾತನಾಡಿ, ಜೈನ್ ಕಾಲೇಜಿನಲ್ಲಿ ಫೆ.6ರಂದು ಕಾಲೇಜು ಫೆಸ್ಟ್ ನಡೆಸಲಾಗಿತ್ತು.   ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಡಾ. ಬಿ.ಆರ್. ಅಂಬೇಡ್ಕರ್ ಅಲ್ಲ. ಅವರು ‘ಬಿಯರ್ ಅಂಬೇಡ್ಕರ್’ ಎಂದು ಅವಹೇಳನ ಮಾಡಿದ್ದಾರೆ. ಸ್ಕಿಟ್ ನಲ್ಲಿ ದಲಿತ ಯುವತಿ ಬಗ್ಗೆಯೂ ಅವಮಾನ ಮಾಡಿದ್ದು, ‘ಡೋಂಟ್ ಟಚ್ ಮಿ, ಟಚ್ ಮಿ’ ಎಂಬ ಹಾಡನ್ನು ಹಾಕಿ ಗೇಲಿ ಮಾಡಿದ್ದಾರೆ. ‘ನೀವು ಡಿ-ಲಿಟ್ ಆಗಿರುವಾಗ ದಲಿತರಾಗಿರಲು ಕಾರಣವೇನು’ ಎಂದು ವಿವಾದಾತ್ಮಕವಾಗಿ ನುಡಿದಿರುವುದು ಖಂಡನೀಯವಾಗಿದೆ ಎಂದರು.

ಕಿರು ನಾಟಕವೊಂದರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ, ಜೈನ್ ವಿವಿಯ ಉತ್ಸವದಲ್ಲಿ ಅದನ್ನು ಪ್ರದರ್ಶನ ಮಾಡಿ ಸಂಭ್ರಮಿಸಿದೆ. ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಕೂಡಲೇ ರದ್ದು ಮಾಡಬೇಕು. ಯುಜಿಸಿ ಇದನ್ನು ಗಂಭೀರವಾಗಿ ಪರಿಗಣಿಸಿ ಯುಜಿಸಿ ನಿಯಮಗಳ ಅಡಿ ವಿವಿಗೆ ನಿರ್ಬಂಧ ವಿಧಿಸಬೇಕು ಎಂದು ಒತ್ತಾಯಿಸಿದರು.
ಭಾರತದಲ್ಲಿ ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದಂತಹ ಅಸ್ಪೃಶ್ಯತೆ, ಜಾತಿ ಪದ್ಧತಿಯನ್ನು ತೊಡೆದು ಹಾಕಿ ಸಮಾನತೆಯನ್ನು ಸಾರಿ, ಇಡೀ ವಿಶ್ವಕ್ಕೆ ಮಾದರಿಯಾದಂತಹ ಡಾ. ಬಿ.ಆರ್ ಅಂಬೇಡ್ಕರ್ ರವರನ್ನು ಅತ್ಯಂತ ಕೀಳಾಗಿ ಚಿತ್ರಿಸಿರುವುದು ದಲಿತರ ಮನಸ್ಸಿಗೆ ಅಶಾಂತಿಯನ್ನು ಉಂಟು ಮಾಡಿದ್ದು, ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನವನ್ನು ಮಾಡಿದವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜೈನ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆ 1989ರ ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆ 1860ರ ಅಡಿಯಲ್ಲಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ, ಕಾನೂನಿನ ಅನುಸಾರ ಕ್ರಮವನ್ನು ಕೈಗೊಳ್ಳಬೇಕು. ದೇಶದ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಸರಕಾರ ಎಚ್ಚರಿಕೆಯನ್ನು ವಹಿಸಬೇಕು ಎಂದು ತಿಳಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿರುವರ ವಿರುದ್ಧ ಎಸ್‌ಸಿ ಸೆಕ್ಷನ್ 3ರ ಅಡಿಯಲ್ಲಿ ಹಾಗೂ ಎಸ್ಟಿ ಕಾಯ್ದೆ, ಹಾಗೇಯೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153, 153ಎ, 295, 499, 500, 503, 504, 506 ಮತ್ತು 34ರ ದೂರನ್ನು ಪರಿಗಣಿಸಿ ಪ್ರದರ್ಶಕರು ಮತ್ತು ವಿಶ್ವವಿದ್ಯಾಲಯ ಅಧಿಕಾರಿಗಳ ವಿರುದ್ಧ ದೂರನ್ನು ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

ಈ‌ ಸಂದರ್ಭದಲ್ಲಿ ಕರೆಪ್ಪಾ ಗುಡೆನ್ನವರ, ಬಸವರಾಜ ನಾಯಕ, ಆಕಾಶ ಬೆವಿನಕಟ್ಟಿ, ದಯಾನಂದ ಪವಾರ, ಮಹಾದೇವ ತಳವಾರ, ಸಂತೋಷ ಹಲಗೌರರ, ರವಿ ಬಸ್ತವಾಡಕರ್, ಸರಳಾ ಸಾತಪುತೆ, ದೀಕ್ಷಾ ಪೊಜಾರಿ,  ಪ್ರವೀಣ ಮಾದರ, ಯಲ್ಲಪ್ಪಾ ಭಜಂತ್ರಿ,  ಡಿ ಕಾಂಬಳೆ ಹಾಗೂ ಇತರರು ಇದ್ದರು.