ಅಶ್ವತ್ಥ ನಾರಾಯಣ ಗೋಡ್ಸೆ ವಂಶಸ್ಥರು: ಯು. ಟಿ. ಖಾದರ್

ಬೆಂಗಳೂರು: ಗಾಂಧೀಜಿ ಕೊಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಗೋಡ್ಸೆ ವಂಶಸ್ಥರು ಅಶ್ವತ್ಥ ನಾರಾಯಣ ಎಂದು ಪ್ರತಿಪಕ್ಷದ ಉಪನಾಯಕ ಯು. ಟಿ. ಖಾದರ್ ವಾಗ್ದಾಳಿ ನಡೆಸಿದರು.
ಟಿಪ್ಪು ರೀತಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆಯಬೇಕು ಎಂಬ ಸಚಿವ ಅಶ್ವತ್ಥ ನಾರಾಯಣ ಹೇಳಿಕೆಗೆ ವಿಧಾನಸೌಧದಲ್ಲಿ ಗುರುವಾರ ತಿರುಗೇಟು ನೀಡಿದರು.
ನೇರಾ ನೇರವಾಗಿ ಹೋರಾಟ ಮಾಡುವ ಹಾಗೂ ಚರ್ಚೆ ಮಾಡುವ ಧೈರ್ಯ ಇವರಿಗೆ ಇಲ್ಲ. ಅಶ್ವತ್ಥ ನಾರಾಯಣ, ಬಿಜೆಪಿಯದ್ದು ಮೀರ್ ಸಾದಿಕ್ ವಂಶ. ಇವರು ಹೊಡೆದುಹಾಕಲು ನೋಡಿದರೆ ಕಾಂಗ್ರೆಸ್ ನಾಯಕರನ್ನು ಜನರೇ ಮೂರನೇ ಮಹಡಿಗೆ ತಂದು ಕೂರಿಸ್ತಾರೆ. ರಾಜ್ಯದ ಜನರೇ ಇವರಿಗೆ ಉತ್ತರವನ್ನೂ ಕೊಡ್ತಾರೆ ಎಂದರು.
ಇದೇ ವಿಚಾರವಾಗಿ ಕೆಪಿಪಿಸಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ರಣದೀಪ್ ಸಿಂಗ್ ಸುರ್ಜೆವಾಲ, ಬಿಜೆಪಿಯವರು ಮಹಾತ್ಮ ಗಾಂಧಿಯನ್ನೇ ಕೊಂದವರು. ಹಿಂಸೆ ಅನ್ನೋದು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರನ್ನು ಬಿಟ್ಟಿಲ್ಲ. ಬಿಜೆಪಿ ಅಶಾಂತಿ ಹಾಗೂ ಹಿಂಸೆಯನ್ನು ಮುಂದುವರಿಸುವ ಧೋರಣೆಯನ್ನು ಹೊಂದಿದೆ ಎಂದು ಟೀಕಿಸಿದರು.
ಅಶ್ವಥ್ ನಾರಾಯಣ್ ನಳಿನ್ ಕುಮಾರ್ ಕಟೀಲು ಹಾಗೂ ಅವರ ಕಂಪನಿಗೆ ಆತಂಕ ಇದೆ. ರಾಜ್ಯದಲ್ಲಿ ಬಿಜೆಪಿ ಎದುರಿಸುತ್ತಿರುವ ಆತಂಕ ಈ ರೀತಿ ಅವರ ಬಾಯಲ್ಲಿ ಹೊರಬಂದಿದೆ. ನಾಯಕರ ಮಾತುಗಳಲ್ಲಿ ಆತಂಕ ಮೂಡಿಬರುತ್ತಿದೆ. ಮುಂದಿನ 50 ರಿಂದ 60 ದಿನಗಳಲ್ಲಿ ಎದುರಾಗುವ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಆತಂಕ ಇದೆ ಎಂದರು.