Belagavi News In Kannada | News Belgaum

ಫೆ.19,20ರಂದು ವೀರರಾಣಿ ಕಿತ್ತೂರು ಚನ್ನಮ್ಮನ ಬೃಹತ್ ನಾಟಕ ಪ್ರದರ್ಶನ

ಬೈಲಹೊಂಗಲ: ‘ಯುವ ಪೀಳಿಗೆಗೆ ವೀರರಾಣಿ ಕಿತ್ತೂರು ಚನ್ನಮ್ಮನ ಇತಿಹಾಸ ಹಾಗೂ ರಾಷ್ಟ್ರಪ್ರೇಮ ಕುರಿತು ಜಾಗೃತಿ ಮೂಡಿಸುವ ಸದುದ್ದೇಶದಿಂದ ಫೆ.19, 20ರಂದು ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ರಾಜ್ಯ ಸರ್ಕಾರ, ರಂಗಾಯಣ ಧಾರವಾಡ, ಜಗದೀಶ ಮೆಟಗುಡ್ಡ ಅಭಿಮಾನಿ ಬಳಗದಿಂದ ವೀರರಾಣಿ ಕಿತ್ತೂರು ಚನ್ನಮ್ಮನ ಬೃಹತ್ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ’ ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ನಾಟಕ ಪ್ರದರ್ಶನ ಕುರಿತು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ನಾಟಕ ಪ್ರದರ್ಶನದ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ದೈತ್ಯ ಬ್ರಿಟಿಷ್ ಸಾಮ್ರಾಜ್ಯವನ್ನು ಸೆದೆ ಬಡಿದು ಕಿತ್ತೂರು ಇತಿಹಾಸವನ್ನು ಸೂರ್ಯ, ಚಂದ್ರ ಇರುವರೆಗೆ ಅಜರಾಮವಾಗಿ ಉಳಿಸಿರುವ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮೂಟೂರ ಬಾಳಪ್ಪ, ಕಿತ್ತೂರು ನಾಡಿನ ಶೂರ, ಧೀರರ ಶೌರ್ಯ, ಸಾಹಸ, ರಾಷ್ಟ್ರಪ್ರೇಮದ ಕುರಿತು ಮಕ್ಕಳಿಗೆ ತಿಳಿಸಿಕೊಡುವ ಉದ್ದೇಶದಿಂದ ಬೈಲಹೊಂಗಲ ಮತಕ್ಷೇತ್ರದಲ್ಲಿ ಕಿತ್ತೂರು ಚನ್ನಮ್ಮನ ನಾಟಕ ಪ್ರದರ್ಶನ ನಡೆಸಲಾಗುತ್ತಿದೆ. ನಾಟಕದಲ್ಲಿ ಆನೆ, ಒಂಟೆ, ಕುದರೆ ಸೇರಿ 300ಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾ ಪ್ರದರ್ಶನ ಮಾಡಲ್ಲಿದ್ದಾರೆ’ ಎಂದರು.
ಉದ್ಯೆಮಿ ವಿಜಯ ಮೆಟಗುಡ್ಡ ಮಾತನಾಡಿ, ‘ನಾಟಕಕ್ಕೆ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, 20 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ನಾಟಕದ ಉದ್ಘಾಟನೆಗೆ ನಾಡಿನ ವಿವಿಧ ಮಠಮಾನ್ಯಗಳ ಪೂಜ್ಯರು, ಗಣ್ಯಮಾನ್ಯರು ಆಗಮಿಸಲ್ಲಿದ್ದಾರೆ. ನಾಟಕಕ್ಕೆ ಉಚಿತ ಪ್ರವೇಶವಿದ್ದು ನಾಟಕ ವೀಕ್ಷಿಸಿದ ಜನತೆಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಷೇತ್ರದ ಜನತೆ ನಾಟಕ ಪ್ರದರ್ಶನ ವೀಕ್ಷಿಸಿ ಮಕ್ಕಳಿಗೆ ಕಿತ್ತೂರು ಇತಿಹಾಸ ಪರಿಚಯಿಸಿಕೊಡಬೇಕು’; ಎಂದರು.
ಬಿಜೆಪಿ ಮುಖಂಡಾದ ಸುನೀಲ ಮರಕುಂಬಿ, ಪ್ರಫುಲ್ ಪಾಟೀಲ, ಸುಭಾಸ ತುರಮರಿ, ಚನ್ನಪ್ಪ ಹೊಸೂರ, ರಮೇಶ ಬೋರಕನವರ, ಅನಿಲ ಬೋಳನ್ನವರ, ಬಸವರಾಜ ಯಾಸನ್ನವರ, ಸಚಿನ ಕಡಿ, ಸಂತೋಷ ಹಡಪದ, ಅನೇಕರು ಇದ್ದರು.