Belagavi News In Kannada | News Belgaum

ಚುನಾವಣಾ ಆಕರ್ಷಣೆಯ ಬಜೆಟ್ ಆಗಿದೆ: ಕುರುಬೂರು ಶಾಂತಕುಮಾರ್

ಬೆಂಗಳೂರು: ರಾಜ್ಯ ಬಜೆಟ್ ಚುನಾವಣಾ ಆಕರ್ಷಣೆಯ ಬಜೆಟ್ ಆಗಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಕಾರ ಸಂಘಗಳಲ್ಲಿ ನೀಡುತ್ತಿರುವ ಬಡ್ಡಿ ರಹಿತ ಕೃಷಿ ಸಾಲ 5 ಲಕ್ಷ ರೂ.ಗೆ ಏರಿಕೆ ಮಾಡಿರುವುದು ಸ್ವಾಗತಾರ್ಹ. ಈ ಯೋಜನೆಯನ್ನು ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೂ ವಿಸ್ತರಿಸಬೇಕು. ಕಳಸಾ ಬಂಡೂರಿ ಯೋಜನೆ ಆರಂಭಕ್ಕೆ 80 ಕೋಟಿ ನೀಡುವುದನ್ನು ಕನಿಷ್ಠ 300 ಕೋಟಿಗೆ ಏರಿಕೆ ಮಾಡಬೇಕು. ಗೃಹಿಣಿಯರಿಗೆ ಮಾಸಿಕ 500 ರೂ. ಸಹಾಯಧನ ನೀಡುತ್ತಿರುವುದು ಒಳ್ಳೆಯ ಯೋಜನೆಯಾಗಿದೆ ಎಂದರು.
50 ಲಕ್ಷ ರೂ. ರೈತರಿಗೆ ಬಿತ್ತನೆ ಬೀಜ, ರಸ ಗೊಬ್ಬರ ಖರೀದಿಸಲು ಸಹಾಯಧನ ನೆರವು ನೀಡುವ ಯೋಜನೆ, ತೆಲಂಗಾಣ ರಾಜ್ಯ ಮಾದರಿಯಲ್ಲಿ ಜಾರಿ ಮಾಡಬೇಕು. ಪ್ರತಿ ವರ್ಷ ಪ್ರತಿ ತಿಂಗಳು ಎಕರೆಗೆ 10,000 ರೂ. ನೀಡುತ್ತಿರುವ ರೀತಿ ನಮ್ಮ ರಾಜ್ಯದಲ್ಲೂ ಜಾರಿಯಾಗಬೇಕು. ಕಾಡುಪ್ರಾಣಿಗಳ ದಾಳಿಯಿಂದ ಜೀವ ಹಾನಿ ಆದವರಿಗೆ ಪರಿಹಾರ 15 ಲಕ್ಷಕ್ಕೆ ಏರಿಕೆ ಮಾಡಿರುವುದು ಸಾಲದು. 50 ಲಕ್ಷ ರೈತ ಕುಟುಂಬಗಳಿಗೆ ಜೀವ ಜ್ಯೋತಿ ವಿಮಾ ಯೋಜನೆ ಜಾರಿ, ತೆಲಂಗಾಣ ಮಾದರಿಯಲ್ಲಿ ಜಾರಿಗೆ ತರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಕೃಷ್ಣ ಮೇಲ್ದಂಡೆ ಅಭಿವೃದ್ಧಿ ಯೋಜನೆಗೆ 5,000 ಕೋಟಿ ಅನುದಾನ, 2,000 ಕೆರೆಗಳ ಅಭಿವೃದ್ಧಿ ಯೋಜನೆ ಅನುಷ್ಠಾನ ಕಾರ್ಯಗತವಾದರೆ ಒಳ್ಳೆಯ ನಿರ್ಧಾರವಾಗಿದೆ. ಕೊರೊನಾ ಸಂಕಷ್ಟದಿಂದ ಸಮಸ್ಯೆ ಎದುರಿಸುತ್ತಿರುವ ರೈತ ಉತ್ಪಾದಕ ಸಂಸ್ಥೆಗಳಿಗೆ ಆರ್ಥಿಕ ನೆರವು 10 ಲಕ್ಷ ಸಹಾಯಧನ ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದೆ. ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಉನ್ನತೀಕರಣಗೊಳಿಸಿ ಯಥನಾಲ್ ಉತ್ಪಾದನಾ ಘಟಕವನ್ನು ಆರಂಭಿಸಲು ಬಜೆಟ್‌ನಲ್ಲಿ ತೀರ್ಮಾನ ಕೈಗೊಂಡಿರುವುದು, ಕಬ್ಬು ಬೆಳೆಗಾರರಿಗೆ ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ತೂಕದಲ್ಲಿ ಮೋಸವಾಗಿದ್ದು, ಸಕ್ಕರೆ ಇಳುವರಿಯಲ್ಲಿ ಮೋಸ ತಪ್ಪಿಸಲು, ಯಾವುದೇ ಕಾರ್ಯಯೋಜನೆ ಪ್ರಕಟಿಸಿಲ್ಲ ಇದು ನಮಗೆ ಬೇಸರ ತಂದಿದೆ. ಎಲ್ಲ ಯೋಜನೆಗಳು ಚುನಾವಣೆ ದೃಷ್ಟಿಯಲ್ಲಿ ಬಜೆಟ್‌ನಲ್ಲಿ ಮಾತ್ರ ಘೋಷಣೆ ಆಗಬಾರದು, ಕಾರ್ಯರೂಪಕ್ಕೆ ಬರಬೇಕು. ಈ ದಿಕ್ಕಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುವುದು ಸೂಕ್ತ ಎಂದು ತಿಳಿಸಿದರು./////