ಆರ್‌ಸಿಬಿ ತಂಡಕ್ಕೆ ಸ್ಮೃತಿ ಮಂದಾನ ನಾಯಕಿ

ನವದೆಹಲಿ: ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿಲಿದ್ದಾರೆ. ಆರ್‌ಸಿಬಿ ತಂಡದ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಶನಿವಾರ ಆರ್‌ಸಿಬಿ ಮಹಿಳಾ ತಂಡದ ನಾಯಕಿಯ ಹೆಸರನ್ನು ಘೋಷಿಸಿದರು.
ಮಹಿಳಾ ಪ್ರೀಮಿಯರ್ ಲೀಗ್‌ನ ಅತ್ಯಂತ ದುಬಾರಿ ಆಟಗಾರ್ತಿ ಆಗಿರುವ ಸ್ಮೃತಿ ಮಂದಾನ ಆರ್‌ಸಿಬಿ ಸಾರಥಿಯಾಗುವ ಬಗ್ಗೆ ಮೊದಲೇ ನಿರೀಕ್ಷೆ ಮಾಡಲಾಗಿತ್ತು. ಇದನ್ನು ಶನಿವಾರ ಫ್ರಾಂಚೈಸಿ ಅಧಿಕೃತವಾಗಿ ಘೋಷಣೆ ಮಾಡಿದೆ.
ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಆರ್‌ಸಿಬಿ ಫ್ರಾಂಚೈಸಿಯ ಶ್ರೀಮಂತ ಪರಂಪರೆ, ನಿಷ್ಠಾವಂತ ಅಭಿಮಾನಿಗಳ ಬಗ್ಗೆ ಸ್ಮೃತಿ ಮಂದಾನಗೆ ತಿಳಿಸಿದರು. ನಾಯಕಿಯಾಗಿ ಆಯ್ಕೆಯಾಗಿರುವ ಮಂದಾನಾಗೆ ಶುಭ ಹಾರೈಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಅಧ್ಯಕ್ಷರಾಗಿರುವ ಪ್ರಥಮೇಶ್ ಮಿಶ್ರಾ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ತನ್ನ ನಾಯಕತ್ವದ ಮೂಲಕ ತಂಡವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೊದಲ ಆವೃತ್ತಿಗಾಗಿ ಆರ್ ಸಿಬಿ ತಂಡ ಬಲಿಷ್ಠವಾಗಿ ಕಾಣುತ್ತಿದ್ದು, ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸದಲ್ಲಿದೆ.
ಸಂತಸ ವ್ಯಕ್ತಪಡಿಸಿದ ಮಂದಾನ: ಆರ್‌ಸಿಬಿ ನಾಯಕತ್ವವನ್ನು ಪಡೆದ ನಂತರ ಮಂದಾನ ಫ್ರಾಂಚೈಸಿಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡುಹೋಗುವ ವಿಶ್ವಾಸ ವ್ಯಕ್ತಪಡಿಸಿದರು. “ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಆರ್‌ಸಿಬಿ ಮುನ್ನಡೆಸುವ ಬಗ್ಗೆ ಮಾತನಾಡುವುದನ್ನು ನೋಡುವುದು ವಿಶೇಷ ಭಾವನೆ. ಈ ಅದ್ಭುತ ಅವಕಾಶವನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ. ವಿಶ್ವದ ಅತ್ಯುತ್ತಮ ಅಭಿಮಾನಿ ಬಳಗದ ಬೆಂಬಲ ಮತ್ತು ಪ್ರೀತಿಯನ್ನು ಪಡೆಯಲು ಕಾಯುತ್ತಿದ್ದೇನೆ” ಎಂದು ಮಂದಾನ ಹೇಳಿದರು.
ಮಾರ್ಚ್ 4ರಿಂದ ಚಾಲನೆ: ಮಾರ್ಚ್ 4ರಿಂದ ಮಹಿಳಾ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಗೆ ಚಾಲನೆ ಸಿಗಲಿದೆ. ಎಲ್ಲಾ ಪಂದ್ಯಗಳು ಮುಂಬೈನ ಬ್ರಾಬೌರ್ನ್ ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೊದಲ ಆವೃತ್ತಿಯಲ್ಲಿ 5 ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲನೇ ಪಂದ್ಯವನ್ನು ಮಾರ್ಚ್ 5 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.
ಆರ್‌ಸಿಬಿ ಸಂಪೂರ್ಣ ತಂಡ: ಸ್ಮೃತಿ ಮಂದಾನ (ನಾಯಕಿ), ಎಲ್ಲಿಸ್ ಪೆರಿ, ಎರಿನ್ ಬರ್ನ್ಸ್, ಹೀತರ್ ನೈಟ್, ಡೇನ್ ವ್ಯಾನ್ ನೀಕೆರ್ಕ್, ರಿಚಾ ಘೋಷ್ (ವಿಕೆಟ್ ಕೀಪರ್), ಮೇಗನ್ ಸ್ಕಟ್, ದಿಶಾ ಕಸತ್, ರೇಣುಕಾ ಸಿಂಗ್, ಪ್ರೀತಿ ಬೋಸ್, ಕೋಮಲ್ ಝಂಝಾದ್, ಸಹನಾ ಪವಾರ್, ಇಂದ್ರಾಣಿ ರಾಯ್, ಸೋಫಿ ಡಿವೈನ್, ಕನಿಕಾ ಅಹುಜಾ, ಆಶಾ ಶೋಭನಾ, ಪೂನಮ್ ಖೇಮ್ನಾರ್, ಶ್ರೇಯಾಂಕ ಪಾಟೀಲ್.///////