Belagavi News In Kannada | News Belgaum

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆ್ಯಸಿಡ್ ದಾಳಿ

ರಾಮನಗರ: ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ಕನಕಪುರದ ಬೈಪಾಸ್ ರಸ್ತೆಯ ನಾರಾಯಣಪ್ಪ ಕೆರೆ ಬಳಿ ನಡೆದಿದೆ.

ಕನಕಪುರದ ಕುರುಪೇಟೆ ನಿವಾಸಿ ಸುಮಂತ್ ಅಲಿಯಾಸ್ ಅಪ್ಪು ಎಂಬಾತ 17 ವರ್ಷದ ಅಪ್ರಾಪ್ತೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಅಪ್ರಾಪ್ತೆಯ ಬಳಿ ಮಾತನಾಡುವ ಬಾ ಎಂದು ಕರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಪಿಯುಸಿ ವಿದ್ಯಾರ್ಥಿನಿ ತಮ್ಮನ ಜೊತೆ ಬೈಪಾಸ್ ರಸ್ತೆಗೆ ಬಂದಿದ್ದಳು. ಈ ವೇಳೆ ಸುಮಂತ್ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಆದರೆ ಸುಮಂತ್ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ.

ಅಷ್ಟೇ ಅಲ್ಲದೇ ಸುಮಂತ್ ಈ ಹಿಂದೆಯೂ ಹಲವು ಬಾರಿ ಪ್ರೀತಿಸುವಂತೆ ಒತ್ತಾಯಿಸಿದ್ದ. ಅದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಸುಮಂತ್ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಇದಾದ ಬಳಿಕ ಸುಮಂತ್ ಬೈಕ್‍ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಯುವತಿಯ ಮುಖಕ್ಕೆ ಆ್ಯಸಿಡ್ ಎರಚಿದ್ದರಿಂದ ಯುವತಿಯ ಎಡಗಣ್ಣು ಹಾಗೂ ಮುಖಕ್ಕೆ ಗಾಯಗಳಾಗಿದೆ. ಕೂಡಲೇ ಯುವತಿಗೆ ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ಬೆಂಗಳೂರಿನ ನಿಮ್ಹಾನ್ಸ್‌ಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ./////