Belagavi News In Kannada | News Belgaum

ಬಿಜೆಪಿ ಕಮಿಷನ್ ಕೇಳುವ ಸರ್ಕಾರ: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ

ಬೆಳಗಾವಿ:  ಬಿಜೆಪಿ ಸರ್ಕಾರ ಕಮಿಷನ್ ಕೇಳುವ ಸರ್ಕಾರವಾಗಿದ್ದು, ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ . ಇಂತಹ ಕಮಿಷನ್‌ ದಂದೆಯಿಂದ ರಾಜ್ಯದಲ್ಲಿ ಹಲವಾರು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬಿಜೆಪಿ ಸರ್ಕಾರ ವಿರುದ್ಧ ಚಾಟಿ ಬಿಸಿದರು.

ನಗರದ  ಕಾಂಗ್ರೆಸ್‌ ಭವನದಲ್ಲಿ ಬೆಳಗಾವಿ ಗ್ರಾಮೀಣ ಹಾಗೂ  ಬೆಳಗಾವಿ ಮಹಾನಗರ ಜಿಲ್ಲಾ ಕಾಂಗ್ರೆಸ್‌  ಸಮಿತಿಗಳ ವತಿಯಿಂದ  ನಡೆದ ಕಾಂಗ್ರೆಸ್ ಪಕ್ಷದ ಗೃಹ ಜ್ಯೋತಿ, ಗೃಹ ಲಕ್ಷ್ಮಿ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮ ವೇಳೆ ಮಾತನಾಡಿದ ಅವರು,   ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದರೂ ಪ್ರಧಾನಿ ಮೋದಿ ಹಾಗೂ ಬೊಮ್ಮಾಯಿ ತುಟಿ ಪಿಟಕ್ ಅಂತಿಲ್ಲ ಎಂದು ವ್ಯಂಗವಾಡಿದರು.

 

 

ಸಂಕಷ್ಟದಲ್ಲಿರುವ ಜನರಿಗೆ‌ ಕೈ ಹಿಡಿಯುವ ಪಕ್ಷ ಕಾಂಗ್ರೆಸ್: ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಎರಡು ಐತಿಹಾಸಿಕ ಗ್ಯಾರಂಟಿ ಯೋಜನೆ ಗಳನ್ನು ಘೋಷಿಸಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2000 ರೂ. ನೀಡಲು ತೀರ್ಮಾನಿಸಿದೆ ಎಂದು ಹೇಳಿದರು.

ಪಕ್ಷದ ಕಾರ್ಯಕರ್ತರು ಗ್ಯಾರಂಟಿ ಕಾರ್ಡ್ ಅನ್ನು ಪಡೆದುಕೊಂಡು ಪ್ರತಿ ಬೂತ್ ನ ಮನೆ ಮನೆಗೂ ನೀಡಬೇಕು. ಈ ಗ್ಯಾರಂಟಿ ಕಾರ್ಡ್ ಅನ್ನು ಜನರಿಗೆ ನೀಡಿ ನಮ್ಮ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಯಾರಿಗೆಲ್ಲ ಈ ಯೋಜನೆ ಬಗ್ಗೆ ಆಸಕ್ತಿ ಇದೆ ಎಂದು ಅವರ ವಿವರ ಪಡೆಯಬೇಕು. ಈ ಸಮಯದಲ್ಲಿ ಮನೆ ಮನೆಗೆ ಹೋಗಿ ಕಾರ್ಡ್ ನೀಡುವ ನೋಂದಣಿದಾರರ ಹೆಸರು, ದೂರವಾಣಿ ಸಂಖ್ಯೆ ಪಡೆಯಬೇಕು. ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಸುಳ್ಳು ಹೇಳುವ ಮೂಲಕ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಪಕ್ಷ ಮಾತ್ರ ಜನಪರವಾಗಿದ್ದು, ಸದ್ಯ ಎರಡು ಯೋಜನೆಗಳನ್ನು ಘೋಷಣೆ ಮಾಡಿದೆ. ಮುಂಬರುವ ದಿನಗಳಲ್ಲಿ ಇನ್ನು ಜನರಿಗೆ ಅನೂಕೂಲಕರವಾಗುವ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದರು.


ನುಡಿದಂತೆ ನಡೆದ ಕೈ ಪಕ್ಷ:  ಹಿಂದೆ ಇದ್ದ ಸಿದ್ದರಾಮಯ್ಯ ಸರ್ಕಾರದಲ್ಲಿ ನಾವು ಏನು ಹೇಳಿದ್ದೇವೆಯೋ, ಅದೇ  ರೀತಿ ಜನರಿಗೆ ಸರ್ಕಾರಿ ಶಾಲೆ, ರಸ್ತೆ, ಅಕ್ಕಿ,  ಉದ್ಯೋಗ ಸೃಷ್ಟಿ ಮಾಡುವಂತಾ ಕಾರ್ಯಕ್ರಮಗಳು,  ನೀರಾವರಿ ಯೋಜನೆಗಳು, ಕೃಷಿ ಹೊಂಡ ಸೇರಿದಂತೆ ಅನೇಕ ಯೋಜನೆಗಳನ್ನು ಕರ್ನಾಟಕ ಜನತೆಗೆ ಕಾಂಗ್ರೆಸ್‌ ಪಕ್ಷ ಕೊಟ್ಟದೆ.  ಇಂತಹ ಉತ್ತಮ ಕಾರ್ಯಕ್ರಮಗಳನ್ನು ಮತ್ತೆ ನಮ್ಮ ಪ್ರಣಾಳಿಕೆಯಲ್ಲಿ ತರಲಾಗುವುದು ಎಂದರು.

ಈ ವೇಳೆ  ಕೆಪಿಸಿಸಿ ಕಾರ್ಯಾಧ್ಯಕ್ಷ  ಸಲೀಂ ಅಹಮದ್ ,ಎಐಸಿಸಿ ಕಾರ್ಯದರ್ಶಿ  ವಿಷ್ಣುನಾಥ್,  ಶಾಸಕ ಮಹಾಂತೇಶ ಕೌಜಲಗಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮಾಜಿ ಶಾಸಕರಾದ ಡಿ.ಬಿ. ಇನಾಂದಾರ, ಫಿರೋಜ್‌ ಸೇಠ್‌, ಅಶೋಕ ಪಟ್ಟಣ, ಎಂಎಲ್ಸಿ ಚನ್ನರಾಜ ಹೊಟ್ಟಿಹೊಳಿ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ  ವಿನಯ್ ನಾವಲಗಟ್ಟಿ, ಬೆಳಗಾವಿ ಗ್ರಾಮಾಂತರ ಅಧ್ಯಕ್ಷ ರಾಜು ಸೇಟ್, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಸುನೀಲ ಹಣಮನ್ನವರ, ಜಿಲ್ಲಾ ಕಾರ್ಯದರ್ಶಿ ಪ್ರದೀಪ ಎಂ.,ಕಾಂಗ್ರೆಸ್‌ ಮುಖಂಡ ಬಾಬಾಸಾಹೇಬ್‌ ಪಾಟೀಲ ಸೇರಿದಂತೆ ಸೇವಾದಳದ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್‌  ಮುಖಂಡರು, ಕಾರ್ಯಕರ್ತರು  ಉಪಸ್ಥಿತರಿದ್ದರು.///////