ಐಪಿಎಸ್ ರೂಪಾ-ಐಎಎಸ್ ರೋಹಿಣಿ ಜಟಾಪಟಿ: ಇಬ್ಬರನ್ನೂ ವರ್ಗಾವಣೆ ಮಾಡಿದ ಸರ್ಕಾರ

ಬೆಂಗಳೂರು: ಐಪಿಎಸ್ ವರ್ಸಸ್ ಐಎಎಸ್ ಜಟಾಪಟಿ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಿದ್ದು, ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆಗೊಳಿಸಲು ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.
ಐಪಿಎಸ್ ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಂಬಂಧಿಸಿ ಸ್ಥಳ ನಿಯುಕ್ತಿಗೊಳಿಸದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಡಿ. ರೂಪಾ ಕರಕುಶಲ ಅಭಿವೃದ್ಧಿ ನಿಗಮ ಎಂಡಿಯಾಗಿದ್ದರು ಹಾಗೂ ರೋಹಿಣಿ ಸಿಂಧೂರಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆಯಾಗಿದ್ದರು. ಇವರ ಜೊತೆಗೆ ರೂಪಾ ಅವರ ಪತಿ ಐಎಎಸ್ ಅಧಿಕಾರಿ ಮುನೀಷ್ ಮೌದ್ಗಿಲ್‍ರನ್ನು ರಾಜ್ಯಸರ್ಕಾರ ವರ್ಗಾವಣೆ ಮಾಡಿದೆ.
ಎಚ್.ಬಸವರಾಜೇಂದ್ರ ಅವರನ್ನು ರೋಹಿಣಿ ಅವರ ಸ್ಥಾನಕ್ಕೆ ನಿಯೋಜಿಸಿದ್ದರೆ ಭಾರತಿ ಅವರನ್ನು ರೂಪಾ ಅವರ ಜಾಗಕ್ಕೆ ನಿಯೋಜಿಸಲಾಗಿದೆ. ರೂಪಾ ಪತಿ ಮುನಿಶ್ ಮೌದ್ಗಿಲ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಪರ್ಸನಲ್ ಮತ್ತು ಅಡ್ಮಿನಿಸ್ಟ್ರೇಟಿವ್ ರಿಫಾರ್ಮ್ಸ್ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ನಿನ್ನೆಯಷ್ಟೇ ರಾಜ್ಯ ಸರ್ಕಾರ ಇಬ್ಬರು ಮಹಿಳಾ ಅಧಿಕಾರಿಗಳಿಗೆ ನೋಟಿಸ್ ನೀಡಿ ತರಾಟೆ ತೆಗೆದುಕೊಂಡಿತ್ತು. ಇನ್ನೊಬ್ಬ ಸರ್ಕಾರಿ ಅಧಿಕಾರಿಯ ವಿರುದ್ಧದ ಆರೋಪಕ್ಕೆ ಮಾಧ್ಯಮ ಬಳಕೆ ಮಾಡಬೇಡಿ. ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆಯಿದೆ ಎಂದು ಮಹಿಳಾ ಅಧಿಕಾರಿಗಳಿಗಿಬ್ಬರಿಗೂ ರಾಜ್ಯ ಸರ್ಕಾರ ಸೂಚನೆ ನೀಡಿತ್ತು.
ರೋಹಿಣಿ ಸಿಂಧೂರಿ, ಡಿ.ರೂಪಾ ಬೀದಿ ರಂಪಾಟ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ರಾಜ್ಯ ಸರ್ಕಾರ ಇಬ್ಬರಿಗೂ ನೋಟಿಸ್ ಜಾರಿ ಮಾಡಿದೆ. ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆ ಇದೆ. ಆದರೆ ಅದನ್ನು ಬಿಟ್ಟು ನೀವು ಮಾಧ್ಯಮ ಮುಂದೆ ಹೋಗಿದ್ದೀರಿ. ಇದರಿಂದ ರಾಜ್ಯ ಸರ್ಕಾರಕ್ಕೆ ಮುಜುಗರ ಆಗಿದೆ. ಇದು ಅಖಿಲ ಭಾರತೀಯ ಸೇವಾ ನಿಯಮಗಳ ಉಲ್ಲಂಘನೆ ಎಂದು ಹೇಳಿತ್ತು./////