ರೈತರ ಸಾಲ ಮನ್ನಾ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲವೆಂದ ಸಚಿವ ಎಸ್.ಟಿ. ಸೋಮಶೇಖರ್

ಬೆಂಗಳೂರು: ರಾಜ್ಯದಲ್ಲಿ ಮತ್ತೆ ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದೆ ಇಲ್ಲ ಎಂದು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ, ರೈತರ ಸಾಲಮನ್ನಾದ ಬಗ್ಗೆ ಪ್ರಶ್ನೆ ಕೇಳಿದರು. ಸದಸ್ಯರು ಸದನದಲ್ಲಿ ಇಲ್ಲದ ಕಾರಣ, ಸದನದಲ್ಲಿ ಚರ್ಚೆ ಆಗಲಿಲ್ಲ. ಆದರೆ ಸದಸ್ಯರ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಮತ್ತೆ ಸಾಲಮನ್ನಾ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ತಿಳಿಸಿದರು.
ಜನವರಿ 2023 ಅಂತ್ಯಕ್ಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೂಲಕ 22,88,090 ರೈತರು ಸಾಲ ಪಡೆದಿದ್ದಾರೆ. ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಲ್ಲಿ 9,006 ರೈತರು ಸಾಲ ಪಡೆದಿದ್ದಾರೆ. ಒಟ್ಟು 22,96,096 ರೈತರು 1 ಲಕ್ಷದ ವರೆಗೆ ಸಾಲ ಪಡೆದಿದ್ದಾರೆ. ಮತ್ತೆ ರೈತರ ಸಾಲಮನ್ನಾ ಮಾಡುವ ಚಿಂತನೆ ಸರ್ಕಾರಕ್ಕೆ ಇಲ್ಲ. ಸಾಲಮನ್ನಾ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಲಿಖಿತದ ಮೂಲಕ ಉತ್ತರ ನೀಡಿದರು.