Belagavi News In Kannada | News Belgaum

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾವೇರುತ್ತಿದೆ ಶಿವಾಜಿ ಪ್ರತಿಮೆ ಪಾಲಿಟಿಕ್ಸ್‌

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿನ ರಾಜಹಂಸಗಡ ಕೋಟೆಯ ಅಭಿವೃದ್ಧಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ವಿಚಾರದಲ್ಲಿ ಹಾಲಿ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ, ಮಾಜಿ ಸಚಿವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಹೌದು…. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇರುವಂತಹ ಐತಿಹಾಸಿಕ ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಕ್ರೆಡಿಟ್ ಡೊಡ್ಡ ಫೈಟ್ ನಡೆಯುತ್ತಿದ್ದು, ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರಿದೆ.  ಮಾರ್ಚ್ 5ರಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡುತ್ತಿದ್ದು, ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕರ್ನಾಟಕ ಮಹಾರಾಷ್ಟ್ರದ ಹಲವು ಕಾಂಗ್ರೆಸ್ ನಾಯಕರು ಆಗಮಿಸಲಿದ್ದಾರೆಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮ ಪ್ರಕಟಣೆ ಹೊರಡಿಸಿದ ವಿಚಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿ ಬಿಜೆಪಿ ನಾಯಕರು ಕೆರಳುವಂತೆ ಮಾಡಿದೆ.


ರಾಜಕೀಯ ತಿರುವು ಪಡೆದ ಶಿವಾಜಿ ಪ್ರತಿಮೆ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು, ಶಿವಾಜಿ ಪ್ರತಿಮೆ ಅನಾವರಣ ವಿಚಾರದಲ್ಲಿ ಗ್ರಾಮೀಣ ಶಾಸಕಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಬಿಜೆಪಿ ಸರ್ಕಾರವೇ ಇದಕ್ಕೆ ಅನುದಾನ ನೀಡಿದ್ದರೂ ಕೇವಲ ಕಾಂಗ್ರೆಸ್‌ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದು ಆರೋಪಿಸಿದ್ದರು. ಬಿಜೆಪಿ ನಾಯಕರಾದ ರಮೇಶ ಜಾರಕಿಹೊಳಿ, ಸಂಜಯ ಪಾಟೀಲ ಸೇರಿದಂತೆ ಬಿಜೆಪಿ ಮುಖಂಡರು ರಾಜಹಂಸಗಡ ಕೋಟೆಗೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಅಲ್ಲದೇ, ತಮ್ಮ ಸರ್ಕಾರದ ಅವಧಿಯಲ್ಲೇ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಂಜಯ ಪಾಟೀಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಒಂದು ರುಪಾಯಿ ಬಿಡುಗಡೆ ಆಗಿಲ್ಲ. ಒಂದು ವೇಳೆ ಅನುದಾನ ಬಿಡುಗಡೆಯಾಗಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲೇ ಅನುದಾನ ಬಿಡುಗಡೆಯಾಗಿರುವ ಕುರಿತು ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದರು. ಸದ್ಯ  ಶಿವಾಜಿ ಪ್ರತಿಮೆ ಚರ್ಚೆ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.


ಆರೋಪ-ಪ್ರತ್ಯಾರೋಪ: ರಾಜಹಂಸಗಡ ಕೋಟೆ ಅಭಿವೃದ್ಧಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆ ನನ್ನ ಕನಸಿನ ಯೋಜನೆ ಅಂತಾ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳುತ್ತಾರೆ. ಆದ್ರೆ ಇದು ತನ್ನ ಕನಸಿನ ಕೂಸು ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆಗೆ ಅನುದಾನ ತಂದಿದ್ದು ನಾನು ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ದಾಖಲೆ ಬಿಡುಗಡೆ ಮಾಡಿದ್ದರು. ಅಲ್ಲದೇ ತಾವು ಅನುದಾನ ತಂದಿದ್ದೀರಿ ಎಂಬುದಕ್ಕೆ ತಮ್ಮ ಬಳಿ ದಾಖಲೆ ಇದ್ದರೆ ತೋರಿಸಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ಸವಾಲೆಸೆದಿದ್ದರು. ಇದಕ್ಕೆ ಪ್ರತಿಯಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಹಾಗೂ ಎಂಎಲ್‌ಸಿಯಾದಂತಹ ಚನ್ನರಾಜ ಹಟ್ಟಿಹೊಳಿ ದಾಖಲೆ ಅಷ್ಟೇ ಅಲ್ಲ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

 ಬಸವಣ್ಣನ ಪತ್ರಿಮೆ ಅನಾವರಣಕ್ಕೆ ಹಿಂದೇಟೆಕೆ: ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣಕ್ಕೆ ಆತುರ ತೋರುತ್ತಿರುವ ಶಾಸಕರಿಗೆ ಹಿರೇಬಾಗೇವಾಡಿಯಲ್ಲಿನ ಆಶ್ವಾರೂಢ ಬಸವಣ್ಣನ ಪ್ರತಿಮೆ ಅನಾವರಣಕ್ಕೆ ಕಾಳಜಿ ಏಕೆ ತೋರುತ್ತಿಲ್ಲ. 15 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 4ರ ಬಳಿ, ರಾಜ್ಯ ಹೆದ್ದಾರಿ ವೃತ್ತದಲ್ಲಿ ಹಿರೇಬಾಗೇವಾಡಿಯ ವೃತ್ತದಲ್ಲಿ ಬಸವಣ್ಣನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಆದರೆ, ಈವರೆಗೂ ಬಸವಣ್ಣನ ಪ್ರತಿಮೆ ಅನಾವರಣಕ್ಕೆ ಭಾಗ್ಯವೇ ಸಿಕ್ಕಿಲ್ಲ. ಶಿವಾಜಿ ಪ್ರತಿಮೆಗೂ ಮೊದಲು ಬಸವಣ್ಣನ ಪ್ರತಿಮೆ ಲೋಕಾರ್ಪಣೆ ಮಾಡುವಂತೆ ಹಿರೇಬಾಗೇವಾಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸದ್ಯ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿನ ರಾಜಹಂಸಗಡ ಕೋಟೆಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಪಾಲೆಟಿಕ್ಸ್‌ ಇದು ಮುಂದೆ ಯಾವ ಹಂತ ತಲುಪಲಿದೆ ಕಾದು ನೋಡಬೇಕಿದೆ./////