ಬೆಳಗಾವಿಯಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ

ಬೆಳಗಾವಿ: ನಮ್ಮ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದ ಸ್ಫೂರ್ತಿಯಾದ ಭಗವಾನ್ ಬಸವೇಶ್ವರ ಅವರಿಗೆ ನಮಸ್ಕಾರಗಳು. ಬೆಳಗಾವಿಯ ಜನರ ಪ್ರೀತಿ ಮರೆಯಲಾರದು. ಬೆಳಗಾವಿಯ ನನ್ನ ಬಂಧು ಭಗಿನಿಯರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಬೆಳಗಾವಿಗೆ ಭೇಟಿ ನೀಡುವುದೆಂದರೆ ಯಾವ ತೀರ್ಥಯಾತ್ರೆಗೂ ಕಡಿಮೆಯಲ್ಲ. ಇದು ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ನಾಡು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಗರದ ಹಳೇ ಪಿಬಿ ರಸ್ತೆಯ ಬಿ.ಎಸ್. ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ಹಾಗೂ ಪಿಎಂ ಕಿಸಾನ್ 13ನೇ ಕಂತಿನ ಹಣ ಬಿಡುಗಡೆ ಮಾಡಿ ಅವರು ಮಾತನಾಡಿ, ಭಾರತದ ನವ ನಿರ್ಮಾಣದಲ್ಲಿ ಬೆಳಗಾವಿಯ ಪಾತ್ರ ಸಾಕಷ್ಟಿದೆ. 100 ವರ್ಷಗಳಿಗೂ ಮೊದಲೇ ಇಲ್ಲಿ ಸ್ಟಾರ್ಟಪ್ ಆರಂಭಗೊಂಡಿತ್ತು. ಬಾಬುರಾವ್ ಅವರು ಇಲ್ಲಿ ಸಣ್ಣದಾದ ಘಟಕವೊಂದನ್ನು ಸ್ಥಾಪಿಸಿದ್ದರು. ಈಗ ಬೆಳಗಾವಿಯ ಅಭಿವೃದ್ಧಿಗೆ ಹೊಸ ಗತಿ ಸಿಗಲಿದೆ ಎಂದು ಮೋದಿ ಹೇಳಿದರು.
ಬೆಳಗಾವಿಯ ಈ ಭೂಮಿಯಲ್ಲಿಇಂದು ಚಾಲನೆ ನೀಡಿದ ಯೋಜನೆಗಳು ಬೆಳಗಾವಿಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಿಸಲಿವೆ. ಹಿಂದೂಸ್ತಾನದ ಎಲ್ಲ ರೈತರನ್ನು ಇಂದು ಬೆಳಗಾವಿ ಜತೆ ಬಾಂಧವ್ಯ ಹೊಂದುವಂತೆ ಮಾಡಲಾಗಿದೆ. ದೇಶದ ಎಲ್ಲ ರೈತರ ಖಾತೆಗಳಿಗೆ ಒಂದು ಕ್ಲಿಕ್ ಮೂಲಕ ಹಣ ವರ್ಗಾವಣೆ ಆಗಿದೆ. ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ. ಇಂದು ಬದಲಾಗುತ್ತಿರುವ ಭಾರತದಲ್ಲಿ ಒಂದಾದ ಮೇಲೊಂದರಂತೆ ಅಭಿವೃದ್ಧಿಯಾಗುತ್ತಿದೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಬೆಳಗಾವಿಯಲ್ಲಿ ಇಂದು ಹೊಸ ದಾಖಲೆ ನಿರ್ಮಾಣವಾಗಿದೆ. ಪ್ರಧಾನಿ ಮೋದಿಗೆ ನೀವು ಕೊಟ್ಟ ಪ್ರೀತಿ, ವಿಶ್ವಾಸ ಅವಿಸ್ಮರಣೀಯವಾದದ್ದು. ಬೆಳಗಾವಿಯಲ್ಲಿ ಇಂಥದ್ದೊಂದು ಸಮಾವೇಶ ಹಿಂದೆ ಎಂದೂ ನಡೆದಿಲ್ಲ ಎಂದು ಅವರು, ಹಿಂದಿನ ಸರ್ಕಾರಗಳಲ್ಲಿ ಅಸಾಧ್ಯವಾಗಿರುವುದನ್ನು ಮೋದಿ ಮಾಡಿದ್ದಾರೆ. ಅಸಾಧ್ಯವಾಗಿರುವುದನ್ನು ಸಾಧ್ಯವಾಗಿ ತೋರಿಸಿ ಕೊಟ್ಟಿದ್ದಾರೆ. ಭಾರತದ ಭಗೀರಥ ಪ್ರಧಾನಿ ಮೋದಿ ಎಂದು ಬಣ್ಣಿಸಿದರು.
ಇದಕ್ಕೂ ಮೊದಲು ರೋಡ್ ಶೋದಲ್ಲಿ ಭಾಗಿಯಾದ ಪ್ರಧಾನಿ ಮೋದಿ ಮಾಲಿನಿ ಸಿಟಿಯಲ್ಲಿನ ಸಮಾವೇಶ ವೇದಿಕೆಗೆ ಆಗಮಿಸಿದರು. ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ಸಚಿವರು ಹಾಗೂ ಶಾಸಕರು ಸೇರಿದಂತೆ ಇತರ ಗಣ್ಯರು ಪ್ರಧಾನಿ ಮೋದಿಗೆ ಏಲಕ್ಕಿ ಹಾರ ಹಾಕಿ, ಪೇಟ ತೊಡಿಸಿ, ಸವದತ್ತಿ ಯಲ್ಲಮ್ಮ ಭಾವಚಿತ್ರ ನೀಡಿ ಗೌರವ ಸಲ್ಲಿಸಲಾಯಿತು.
ಈ ಬೃಹತ್ ಸಮಾವೇಶದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಬಿಜೆಪಿ ಸಚಿವರುಹಾಗೂ ಶಾಸಕರು ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು./////